ದಾವಣಗೆರೆ : ಸಮಾಜಿಕ ಸಮಾನತೆಗಾಗಿ ಜೀವನವನ್ನೇ ಮುಡಿಪಿಟ್ಟು, ನಮಗೆಲ್ಲ ವಾಕ್ ಸ್ವಾತಂತ್ರ್ಯ, ಸಮಾನವಾಗಿ ಬದುಕುವ ಸ್ವಾತಂತ್ರ್ಯ ನೀಡಲು ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ-ಸಾಧನೆ ನಮಗೆಲ್ಲ ಪ್ರೇರಣೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ತಿಳಿಸಿದರು.
ದಾವಣಗೆರೆ ನಗರದ ಅಂಬೇಡ್ಕರ್ ವೃತ್ತ ಹಾಗೂ ಗಾಂಧಿ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಫಲವಾಗಿ ಇಂದು ನಾವು-ನೀವು ಗೌರವದಿಂದ ಬದುಕು ನಡೆಸುತ್ತಿದ್ದೇವೆ. ಎಲ್ಲರನ್ನೂ ಸಮಾನವಾಗಿ ನೋಡಬೇಕು, ಎಲ್ಲರೂ ಸಮಾನರು ಅನ್ನೋ ದೃಷ್ಟಿ ಇಟ್ಟುಕೊಂಡು ರಚನೆಯಾದ ನಮ್ಮ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಎಂದರೆ ತಪ್ಪಗಲಾರದು. ಅಂತಹ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಯುವಾಗಲೂ ನಮ್ಮ ಮನಸ್ಸಿನಲ್ಲಿ ನೆಲೆಯೂರಿರುತ್ತಾರೆ ಎಂದರು.
ಅಂಬೇಡ್ಕರ್ ಅಂದರೆ ಅದೊಂದು ದೈತ್ಯ ಶಕ್ತಿ. ಧನಿ ಇಲ್ಲದವರಿಗೆ ಧ್ವನಿಯಾಗಿ, ಶಕ್ತಿ ಇಲ್ಲದವರಿಗೆ ಆತ್ಮಸ್ಥೈರ್ಯವಾಗಿ ನಾನು ನಿಮ್ಮೊಂದಿಗೆ ಇದ್ದೀನಿ ಎಂದು ಸಂವಿಧಾನದ ಮೂಲಕ ಅಂಬೇಡ್ಕರ್ ಅವರ ಧ್ವನಿ ಅಶರೀರವಾಣಿಯಾಗಿ ಕೇಳಿಸುತ್ತದೆ. ಅಂತಹ ಅಂಬೇಡ್ಕರ್ ಅವರ ಮೌಲ್ಯ, ಜೀವನ ಸಾಧನೆಯನ್ನು ಇನ್ನೂ ಹೆಚ್ಚು ಹೆಚ್ಚಾಗಿ ಯುವ ಪೀಳಿಗೆಗೆ ಪಸರಿಸುವ ಕಾರ್ಯ ನಡೆಯಬೇಕು. ಅಂಬೇಡ್ಕರ್ ಅವರ ಚಿಂತನಾ-ಮಂಥನ ಕೇವಲ ಏಪ್ರಿಲ್ 14 ಕ್ಕೆ ಸೀಮಿತವಾಗಿರದೆ ವರ್ಷ ಪೂರ್ತಿ ಅಂಬೇಡ್ಕರ್ ವಿಚಾರಧಾರೆಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ಕೆಲಸ ಆಗಬೇಕು ಎಂದರು.
ದಾವಣಗೆರೆ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯುಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾವಚಿತ್ರಕ್ಕೆ ಪಷ್ಪ ಸಮರ್ಪಿಸಿದರು. ಜಗಳೂರು ವಿಧಾನಸಭಾ ಕ್ಷೇತ್ರದ ರಾಮಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಲಾರ್ಪಣೆ ಮಾಡಿ, ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ವಿಶೇಷವಾಗಿ ಅಂಬೇಡ್ಕರ್ ಜಯಂತಿ ಆಚರಿಸಿದರು.
ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ಜಿಲ್ಲಾಧ್ಯಕ್ಷ ರಾಜಶೇಖರ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜು, ನಿಂಗರಾಜು, ರಾಜಪ್ಪ, ಶಿವಾನಂದ, ಶ್ರೀನಿವಾಸ್ ಕಡ್ಲೆಬಾಳು, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎಸ್ಸಿ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಜೊತೆಯಲ್ಲಿದ್ದರು.