ಜನಗಣತಿಯು ದೇಶದ ಪ್ರತಿ ವ್ಯಕ್ತಿಯ ಆರ್ಥಿಕ ಚಟುವಟಿಕೆ, ಸಾಕ್ಷರತೆ ಮತ್ತು ಶಿಕ್ಷಣ, ವಸತಿ ಮತ್ತು ಗೃಹ
ಸೌಲಭ್ಯಗಳು, ನಗರೀಕರಣ, ಕೃಷಿ ಫಲವತ್ತತೆ, ಪರಿಶಿಷ್ಟ ಜಾತಿ – ಪಂಗಡಗಳು, ಭಾಷೆ, ಧರ್ಮ, ವಲಸೆ, ಅಂಗವೈಕಲ್ಯ ಮತ್ತಿತರ ಹಲವು ಸಾಮಾಜಿಕ-ಸಾಂಸ್ಕೃತಿಕ
ಮತ್ತು ಜನಸಂಖ್ಯಾ ದತ್ತಾಂಶಗಳ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ಅವರು ಹೇಳಿದರು.
ಅವರು ಇಂದು ತಮ್ಮ ಗೃಹಕಚೇರಿಯಲ್ಲಿ ಸ್ವಯಂ ಗಣತಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ತಮ್ಮ ಸ್ವವಿವರಗಳನ್ನು ಭರ್ತಿ ಮಾಡಿದ
ನಂತರ ಮಾಧ್ಯಮಗಳಿಗೆ ವಿವರ ನೀಡಿದರು. ಸಾಮಾನ್ಯ ವ್ಯಕ್ತಿಯ ಅನುಕೂಲತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ರಚಿಸಲು ಜನಗಣತಿಯು ತಳಮಟ್ಟದ
ಮಾಹಿತಿಯನ್ನು ಒದಗಿಸುತ್ತದೆ. ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಲೋಕಸಭೆ, ವಿಧಾನಸಭೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ
ಸ್ಥಾನಗಳು ನಿರ್ಧರಿಸಲಾಗುತ್ತವೆ. ಹೀಗಾಗಿ, ಗಣತಿದಾರರು ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲದೆ ನೈಜವಾಗಿ ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ
ಭಾಗವಹಿಸುತ್ತಿದ್ದಾರೆ ಎಂದರು.
ಮೊದಲ ಹಂತದಲ್ಲಿ ಜನವಸತಿ ಪ್ರದೇಶಗಳಲ್ಲಿನ ಸ್ಥಿತಿಗತಿ, ವಾಸದ ಮನೆಗಳ ಕೊರತೆ ಮತ್ತು ಅದರಿಂದಾಗಿ ವಾಸದ ಮನೆಗಳನ್ನು ಪೂರೈಸಲು
ಕೈಗೊಳ್ಳಬೇಕಾದ ವಸತಿ ಯೋಜನೆಗಳನ್ನು ರೂಪಿಸಲು ಅಗತ್ಯವಾದ ಪರಿಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ ಇದರಿಂದಾಗಿ ಅಭಿವೃದ್ಧಿಗಾಗಿ
ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.
ಜನಗಣತಿಯಲ್ಲಿ ಸಂಗ್ರಹಿಸಲಾದ ವಿವರಗಳು, ಪುರಾವೆಗಳು ವಿಶ್ವಾಸಾರ್ಹ ಮಾಹಿತಿಯ ಭಂಡಾರವಾಗಿರುವುದರಿಂದ ನೀತಿ ನಿರೂಪಣೆಗೆ
ಅಧಾರವಾಗಿವೆ. ವಸತಿ, ಜನಸಂಖ್ಯಾಶಾಸ್ತ್ರ ಸಾಮಾಜಿಕ-ಆರ್ಥಿಕ, ವಲಸೆ ಮತ್ತು ಫಲವತ್ತತೆ ಗುಣಲಕ್ಷಣಗಳ ಕುರಿತಾದ ಮಾಹಿತಿಗಳು ರಾಷ್ಟ್ರೀಯ ಯೋಜನೆ
ಮತ್ತು ಅಭಿವೃದ್ಧಿಗೆ ಅಗತ್ಯವಾಗಿವೆ ಅಲ್ಲದೆ ಉಪೇಕ್ಷಿತ ಗುಂಪುಗಳಿಗೆ ಸಮಗ್ರ ನೀತಿಗಳನ್ನು ರೂಪಿಸಲು ಮತ್ತು ಸಾಮಾಜಿಕ ಸಮಾನತೆಯ ಕಡೆಗೆ ಪ್ರಗತಿಯನ್ನು
ಮೇಲ್ವಿಚಾರಣೆ ಮಾಡಲು ಸಾಮಾಜಿಕ ವಲಯ ಅಭಿವೃದ್ಧಿಯ ಆಧಾರವನ್ನು ರೂಪಿಸುತ್ತದೆ. ವಿಶೇಷವಾಗಿ ವಿಕಲಚೇತನರು, ಪರಿಶಿಷ್ಟ ಜಾತಿ/ಪರಿಶಿಷ್ಟ ವಂಗಡ
ಮತ್ತು ಲಿಂಗ ಸಂಬಂಧಿತ ವಿಷಯಗಳು. ಜನಗಣತಿ ಮಾಹಿತಿಗಳು ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು, ಕೌಶಲ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ತಂತ್ರಗಳನ್ನು
ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಯೋಜನೆ ಮತ್ತು ಉದ್ಯೋಗ ಸೃಷ್ಟಿಯಾಗುತ್ತದೆ. ಒಟ್ಟಾರೆಯಾಗಿ ಮೌಲ್ಯಮಾಪನ ಮತ್ತು
ಮೇಲ್ವಿಚಾರಣೆ ಮಾಡಲು ಜನಗಣತಿಯು ಪ್ರಮುಖ ಸಾಧನಗಳಲ್ಲಿ ಒಂದಾಗಿದೆ ಎಂದರು.
ಎರಡನೇ ಹಂತದ ಕ್ಷೇತ್ರ ಕಾರ್ಯವನ್ನು 2027ರ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಕೈಗೊಂಡು ಪ್ರತಿ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು
ಸಂಗ್ರಹಿಸಲಾಗುವುದು. ಇದೇ ಮೊದಲ ಬಾರಿಗೆ ಸ್ವಯಂ-ಗಣತಿ ವಿಧಾನವನ್ನು ಸಹ ಪರಿಚಯಿಸಲಾಗುತ್ತಿದೆ ಎಂದರು.
2027 ರ ಜನಗಣತಿಯು 1872 ರಿಂದ 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಿದೆ. ಜನಗಣತಿ ಮಾಹಿತಿಗಳು
ಯೋಜನೆ, ಸಮಾಜ ಕಲ್ಯಾಣ ಯೋಜನೆಗಳು. ಸಂಪನ್ಮೂಲ ಹಂಚಿಕೆ ಮತ್ತು ಕ್ಷೇತ್ರಗಳ ಗಡಿ ನಿರ್ಣಯಕ್ಕೆ ಅಡಿಪಾಯವನ್ನು ರೂಪಿಸಲಿವೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರೂ ಸಹ ತಮ್ಮ ನಿವಾಸದಲ್ಲಿ ಸ್ವಯಂ ಗಣತಿ
ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ತಮ್ಮ ಸ್ವವಿವರಗಳನ್ನು ಭರ್ತಿ ಮಾಡಿದರು.
ಈ ಸಂದರ್ಭಗಳಲ್ಲಿ ಮರುಳಸಿದ್ದೇಶ್ವರ ಎಂ, ದಿನೇಶ್ ಡಿ.ಕೆ., ನೋಡಲ್ ಅಧಿಕಾರಿ ವಿವೇಕ್ ಸಿನ್ಹ ಮತ್ತಿತರರು ಉಪಸ್ಥಿತರಿದ್ದರು.
