ಪ್ರತಿ ವರ್ಷದಂತೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬರುತ್ತಿದೆ ಅಲ್ಲದೇ ತಾಪಮಾನ ಹೆಚ್ಚಳದಿಂದಾಗಿ
ಕೆರೆ-ಕಟ್ಟೆ-ಕಾಲುವೆಗಳಲ್ಲಿ ನೀರಿನ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದೆ ಮಾತ್ರವಲ್ಲ ಅಂತರ್ಜಲದ ಮಟ್ಟವೂ ಕುಸಿಯುತ್ತಿರುವುದು ಆತಂಕದ
ಸಂಗತಿಯಾಗಿದ್ದು, ಜಿಲ್ಲೆಯ ಜನರು ಜಲಮೂಲಗಳನ್ನು ಸಂರಕ್ಷಿಸಿಕೊಳ್ಳುವ, ಮಿತವಾಗಿ ಬಳಸುವ ಬಗ್ಗೆ ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ ಎಂದು
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನೆಲ-ಜಲ ಹಾಗೂ ಪರಿಸರವನ್ನು ವೃದ್ಧಿಸಲು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿ,
ಕಾರ್ಯೋನ್ಮುಖರಾಗುವ ಬಗ್ಗೆ ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿಂದಿನ ಅನೇಕ ಸಭೆಗಳಲ್ಲಿ ಚರ್ಚಿಸಿದಂತೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಂಗುಗುಂಡಿಗಳ ನಿರ್ಮಾಣಗೊಳ್ಳದಿರುವುದು ಬೇಸರದ ಸಂಗತಿ ಎಂದ ಅವರು,
ಕೂಡಲೇ ಇಂಗುಗುಂಡಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟು ಸದ್ಬಳಕೆ ಮಾಡಿಕೊಳ್ಳುವ, ಮಳೆ ನೀರು ಕೊಯ್ಲು ಮಾಡುವ ಮೂಲಕ
ಜಲಮರುಪೂರಣಕ್ಕೆ ಗಮನಹರಿಸಬೇಕು. ವಿಶೇಷವಾಗಿ ನೂತನ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಮಳೆನೀರು ಕೊಯ್ಲು ತಂತ್ರದ ಅಳವಡಿಕೆಗೆ
ಮುಂದಾಗಬೇಕು. ಮುಂದಿನ ಒಂದು ವಾರದೊಳಗಾಗಿಅದಕ್ಕಾಗಿ ಯೋಜನೆ ರೂಪಿಸಿ, ಅನುಷ್ಟಾನಕ್ಕೆ ಕ್ರಮವಹಿಸುವಂತೆ ಹಾಗೂ ಸರ್ಕಾರಿ ಕಟ್ಟಡಗಳಿಂದಲೇ
ಮೊದಲು ಆರಂಭಗೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಪ್ರತಿ ಹನಿ ನೀರೂ ಅಮೂಲ್ಯ. ಅದನ್ನು ಮಿತವಾಗಿ ಬಳಸಲು ಎಲ್ಲರೂ ಗಮನಹರಿಸಬೇಕು.ನಗರದ ಕೆಲವು ಪ್ರದೇಶಗಳಲ್ಲಿನ ನಿವಾಸಿಗಳು ತಮ್ಮ
ವಾಹನಗಳನ್ನು ತೊಳೆಯಲು ನೀರನ್ನು ಯಥೇಚ್ಛವಾಗಿ ಬಳಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ ಅಲ್ಲದೇ ಸ್ವತಃ
ತಾವೇ ಖುದ್ದಾಗಿ ನೋಡಿರುವುದಾಗಿ ಅವರು ತಿಳಿಸಿದರು. ಮಹಾನಗರಪಾಲಿಕೆಯ ಪರಿಸರ ಅಧಿಕಾರಿಗಳು ನೀರನ್ನು ಅನಿಯಮಿತವಾಗಿ ಬಳಸುತ್ತಿರುವ
ವ್ಯಕ್ತಿಗಳನ್ನು ಗುರುತಿಸಿ, ಸ್ಥಳ ತನಿಖೆ ಮಾಡಿ, ಅಂತಹ ವ್ಯಕ್ತಿಗಳಿಗೆ ನಿಯಮಾನುಸಾರ ದಂಡ ವಿಧಿಸಬೇಕು ಹಾಗೂ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ
ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರಪಾಲಿಕೆ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ ವಾರ್ಡ್ಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲಿನ ಸಮಸ್ಯೆಗಳಿಗೆ ದ್ವನಿಯಾಗಬೇಕು. ನಿರ್ಲಕ್ಷ್ಯ
ವಹಿಸುವ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದವರು ಎಚ್ಚರಿಸಿದರು.
ನಗರದಲ್ಲಿ ಮಾದರಿ ವಾರ್ಡ್ಗಳನ್ನು ನಿರ್ಮಾಣಗೊಳಿಸುವ ಆಶಯ ಹೊಂದಿರುವುದಾಗಿ ತಿಳಿಸಿದ ಅವರು, ಯಾವುದೋ ಒಂದು ವಾರ್ಡ್ನ್ನು
ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಆ ವಾರ್ಡಿನಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 7ಗಂಟೆಯವರೆಗೆ ಒಂದೊಂದು ಬೀದಿಯಲ್ಲಿ ಜಿಲ್ಲಾಧಿಕಾರಿಗಳ
ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ಆ ವಾರ್ಡಿನಲ್ಲಿನ ಖಾಲಿ ನಿವೇಶನಗಳ ಮಾಲೀಕರು ತಮ್ಮ
ನಿವೇಶನಗಳ ಸ್ವಚ್ಚಗೊಳಿಸಿಕೊಳ್ಳಬೇಕು. ತಪ್ಪಿದಲ್ಲಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದವರು ನುಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕೆರೆ-ಕಟ್ಟೆಗಳಿಂದ ನೀರನ್ನು ಅಕ್ರಮವಾಗಿ ಎತ್ತುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ
ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶಗಳಲ್ಲಿ ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಪಕ್ಷಿಸಂಕುಲ ಅಳಿವಿನಂಚಿಗೆ ಬರಬಹುದು. ಆದ್ದರಿಂದ
ಸಂಬಂಧಿಸಿದ ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಅವುಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು
ವರದಿ ನೀಡುವಂತೆ ಅವರು ಸೂಚಿಸಿದರು. ಅರಣ್ಯ ಪ್ರದೇಶದಲ್ಲಿ ಗುಂಡಿಗಳನ್ನು ತೆಗೆದು, ನೀರು ಸಂಗ್ರಹಿಸುವುದರಿಂದ ಪ್ರಾಣಿಗಳಿಗೆ ಅನುಕೂಲವಾಗಲಿದೆ ಅಲ್ಲದೇ
ಅಂತರ್ಜಲ ಮಟ್ಟದಲ್ಲಿಯೂ ಗಣನೀಯ ಏರಿಕೆ ಕಂಡುಬರಲಿದೆ ಎಂದವರು ಆಶಿಸಿದರು.
ಜಿಲ್ಲೆಯಲ್ಲಿ ನೂತನವಾಗಿ ಅನೇಕ ಬಡಾವಣೆಗಳ ಸೃಜನೆ ಕಾರ್ಯ ನಿರಂತರವಾಗಿದೆ. ಮುಂದಿನ ದಶಕಗಳ ಅವಧಿಯಲ್ಲಿ ಆ ಪ್ರದೇಶದ ನಿವಾಸಿಗಳಿಗೆ
ಶುದ್ಧ ಕುಡಿಯುವ ನೀರನ್ನು ಪೂರೈಸಲು ಇರುವ ಸುಲಭ, ಸರಳ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆಯೂ, ಸಂಭಾವ್ಯ ಅವಕಾಶಗಳ ಬಗ್ಗೆ
ಗಮನಹರಿಸುವಂತೆಯೂ ಅವರು ಸೂಚಿಸಿದರು. ಜಿಲ್ಲೆಯ ಉಪವಿಭಾಗಾಧಿಕಾರಿಗಳು ತಮ್ಮ ತಾಲೂಕುಗಳಲ್ಲಿ ಕಾಲಕಾಲಕ್ಕೆ ಸಭೆಗಳನ್ನು ಆಯೋಜಿಸಿ, ಅಧೀನ
ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಅವರು ಸೂಚಿಸಿದರು.
ಅಧಿಕಾರಿಗಳ ಸಮಯೋಚಿತ ಸಲಹೆ-ಮಾರ್ಗದರ್ಶನದಿಂದ, ಪ್ರಾಮಾಣಿಕ ಕಾರ್ಯಗಳಿಂದಾಗಿ ಅಂತರ್ಜಲ ಮರುಪೂರಣಗೊಳಿಸುವುದು
ಸಾಧ್ಯವಾಗಲಿದೆ. ಅಂತರ್ಜಲಮಟ್ಟ ಹೆಚ್ಚಿಸುವಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ ಆಗಿರಲಿದೆ ಎಂದ ಅವರು, ಅಧಿಕಾರಿಗಳು ನೀರಿನ ಬಳಕೆ ಮತ್ತು ನಿರ್ವಹಣೆ
ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಸ್ವತಂತ್ರ ಕೊಳವೆಬಾವಿ ಹೊಂದಿರುವ 140 ಶಾಲೆಗಳನ್ನು ಗುರುತಿಸಲಾಗಿದೆ. ಅಂತಹ ಶಾಲಾ ಆವರಣದಲ್ಲಿ ಮಳೆನೀರು ಕೊಯ್ಲು
ತಂತ್ರಾಂಶ ಅಳವಡಿಸುವ ಬಗ್ಗೆ ಹಾಗೂ ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಬಗ್ಗೆಯೂ ಸಾರ್ವಜನಿಕ ಶಿಕ್ಷಣ ಇಲಾಖೆಯ
ಉಪನಿರ್ದೇಶಕರು ತ್ವರಿತ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 10.88ಮೀ. ಇದ್ದ ಅಂತರ್ಜಲ ನೀರಿನ ಮಟ್ಟ ಪ್ರಸಕ್ತ ಸಾಲಿನಲ್ಲಿ 11.03ಮೀ.ಕ್ಕೆ ಕುಸಿದಿದೆ. ಮುಂದಿನ
ದಿನಗಳಲ್ಲಿ ಇನ್ನಷ್ಟು ಕೆಳಕ್ಕೆ ಕುಸಿಯುವ ಸಾಧ್ಯತೆ ಇದೆ. ಇದು ಹೀಗೆ ಮುಂದುವರೆದಲ್ಲಿ ಗಂಭೀರ ಸ್ವರೂಪದ ನೀರಿನ ಸಮಸ್ಯೆ ಎದುರಿಸಬೇಕಾಗಬಹುದು
ಎಂದವರು ಎಚ್ಚರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಬಲ್ಲೂರ್ ರವಿಕುಮಾರ್, ಪ್ರೊ.ಕೆ.ಎಸ್.ಈಶ್ವರಪ್ಪ, ಉಪವಿಭಾಗಾಧಿಕಾರಿ
ಚನ್ನಪ್ಪ, ಜಿ.ಪಂ. ಯುವಜನ ನಿರ್ದೇಶಕಿ ಶ್ರೀಮತಿ ರೇಷ್ಮಾ ಕೌಸರ್, ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯಕುಮಾರ್, ಪದವಿಪೂರ್ವ
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿಸ್ವಾಮಿ, ನಾಗೇಂದ್ರ ಸೇರಿದಂತೆ ನೆಲ-ಜಲ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ
ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೊಳಪಡುವ ಅನೇಕ ಕೆರೆಗಳಿದ್ದು, ಅವುಗಳನ್ನು ಗುರುತಿಸಿ, ಆಕಾರ ನಿಗಧಿಪಡಿಸಿ, ಅತಿಕ್ರಮ ತೆರವುಗೊಳಿಸಿ
ಸಂರಕ್ಷಿಸುವ ತುರ್ತು ಅಗತ್ಯವಿದೆ. ಕೆರೆಗಳ ಅಂಚಿನಲ್ಲಿ ಕೆರೆಯ ಹೆಸರು, ಆಕಾರ ಮತ್ತಿತರ ಮಾಹಿತಿ ಫಲಕವನ್ನು ಅಳವಡಿಸಬೇಕು. ಕೆರೆಯ ಸುತ್ತಮುತ್ತಲಲ್ಲಿ ಗಿಡ-
ಮರಗಳನ್ನು ನೆಟ್ಟು ಪೋಷಿಸಿ, ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕು.
- ಬಲ್ಲೂರ್ ರವಿಕುಮಾರ್, ರಾಜ್ಯ ಸಂಚಾಲಕರು, ನೆಲ-ಜಲ ಪರಿಸರ ಒಕ್ಕೂಟ, ದಾವಣಗೆರೆ.
ನಗರದ ಅನೇಕ ವಾರ್ಡುಗಳಲ್ಲಿ ಮಹಾನಗರಪಾಲಿಕೆಯಿಂದ ಸರಬರಾಜು ಮಾಡಲಾಗುವ ಶುದ್ಧ ಕುಡಿಯುವ ನೀರನ್ನು ಯಥೇಚ್ಛವಾಗಿ
ಬಳಸಿಕೊಳ್ಳಲಾಗುತ್ತಿದೆ. ಮನೆಯಂಗಳದ ಕೈತೋಟಗಳಿಗೆ ವಾಹನಗಳನ್ನು ತೊಳೆಯಲು ನೀರನ್ನು ಮಿತಿಯಿಲ್ಲದೆ ಬಳಸುತ್ತಿದ್ದಾರೆ. ನಗರದ ಜನರಿಗೆ ನೀರಿನ
ಮಹತ್ವದ ಅರಿವು ಮೂಡಿಸಬೇಕು.
– ಪ್ರೊ.ಕೆ.ಎಸ್.ಈಶ್ವರಪ್ಪ, ಪರಿಸರಾಸಕ್ತರು, ದಾವಣಗೆರೆ.

