ದಾವಣಗೆರೆ, ಮೇ 20 : ಭಾರತೀಯ ಸೇನೆ ಹಾಗೂ ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆ.ಐ.ಐ.ಟಿ) ಸಂಸ್ಥೆಗಳ ನಡುವಿನ ಒಡಂಬಡಿಕೆಯನ್ವಯ, 2026-27ನೇ ಶೈಕ್ಷಣಿಕ ಸಾಲಿನ ತಾಂತ್ರಿಕ ಮತ್ತು ವೈದ್ಯಕೀಯ ಸ್ನಾತಕ ಪದವಿ ವಿದ್ಯಾಭ್ಯಾಸಕ್ಕಾಗಿ ಸೈನಿಕರು, ಮಾಜಿ ಸೈನಿಕರು ಹಾಗೂ ಹುತಾತ್ಮ ಯೋಧರ ಅವಲಂಬಿತ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಒಡಂಬಡಿಕೆಯು 2026-27 ರಿಂದ 2030-31ರ ವರೆಗಿನ ಐದು ಶೈಕ್ಷಣಿಕ ವರ್ಷಗಳ ಅವಧಿಗೆ ಅನ್ವಯಿಸಲಿದ್ದು, ಕೆ.ಐ.ಐ.ಟಿ ಸಂಸ್ಥೆಯು ಅರ್ಹ ವಿದ್ಯಾರ್ಥಿಗಳಿಗೆ 10% ಟ್ಯೂಷನ್ ಫೀ ವಿದ್ಯಾರ್ಥಿವೇತನದೊಂದಿಗೆ ವೈದ್ಯಕೀಯ (ಎಂ.ಬಿ.ಬಿ.ಎಸ್) ವಿಭಾಗದಲ್ಲಿ 02 ಸೀಟುಗಳು, ದಂತ ವೈದ್ಯಕೀಯ (ಬಿ.ಡಿ.ಎಸ್) ವಿಭಾಗದಲ್ಲಿ 05 ಸೀಟುಗಳು ಮತ್ತು ಬಿ.ಎಸ್ಸಿ ನರ್ಸಿಂಗ್ ಕೋರ್ಸ್ಗೆ 05 ಸೀಟುಗಳನ್ನು ಕಾಯ್ದಿರಿಸಲಾಗಿದೆ. 50% ಟ್ಯೂಷನ್ ಫೀ ವಿದ್ಯಾರ್ಥಿವೇತನದೊಂದಿಗೆ ಕಂಪ್ಯೂಟರ್ ಸೈನ್ಸ್ (ಬಿ.ಟೆಕ್) ಮತ್ತು ಅದಕ್ಕೆ ಸಂಬಂಧಿತ ಪ್ರೋಗ್ರಾಂಗಳಲ್ಲಿ 04 ಸೀಟುಗಳು ಲಭ್ಯವಿವೆ. ಇದರೊಂದಿಗೆ ವೈದ್ಯಕೀಯ ವಿಭಾಗವನ್ನು ಹೊರತುಪಡಿಸಿ, ಸಂಸ್ಥೆಯಲ್ಲಿ ಲಭ್ಯವಿರುವ ಇತರೆ ಯಾವುದೇ ಶಿಕ್ಷಣಕ್ಕೆ ಎಷ್ಟು ಸಂಖ್ಯೆಯಲ್ಲಾದರೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮತ್ತು ಯುದ್ಧ ಅಥವಾ ಯುದ್ಧದಂತಹ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ಅವಲಂಬಿತರು ಸಲ್ಲಿಸುವ ಅರ್ಜಿಗಳ ಆಧಾರದ ಮೇಲೆ, ಗರಿಷ್ಠ 5 ಸೀಟುಗಳಿಗೆ ಶೇ. 100 ರಷ್ಟು ಸಂಪೂರ್ಣ ಟ್ಯೂಷನ್ ಫೀ ವಿನಾಯಿತಿ ನೀಡಲಾಗುವುದು.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ಆನ್ಲೈನ್ ಜಾಲತಾಣ www.kiit.ac.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
