ದಾವಣಗೆರೆ, ಮೇ 21: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ 2026ನೇ ಸಾಲಿನ ಡಿಪ್ಲೊಮಾ ಸಿಇಟಿ (DCET) ಮತ್ತು ಎಂ.ಇ / ಎಂ.ಟೆಕ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಪಿಜಿಸಿಇಟಿ (PGCET) ಪರೀಕ್ಷೆಗಳನ್ನು ಮೇ 23 ರ ಶನಿವಾರದಂದು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಸೂಚನೆ ನೀಡಿದರು.

2026ನೇ ಸಾಲಿನ 2ನೇ ವರ್ಷದ / 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್‌ಗಳ ಲ್ಯಾಟರಲ್ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1,324 ವಿದ್ಯಾರ್ಥಿಗಳು ಡಿಪ್ಲೊಮಾ ಸಿಇಟಿ (DCET) ಪರೀಕ್ಷೆ ಬರೆಯಲಿದ್ದಾರೆ. ಈ ಪರೀಕ್ಷೆಯು ನಗರದ ಪಿ.ಜೆ. ಬಡಾವಣೆಯಲ್ಲಿರುವ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪಿ.ಯು ಕಾಲೇಜಿನಲ್ಲಿ ಮಧ್ಯಾಹ್ನ 2.00 ರಿಂದ 5.00 ಗಂಟೆಯವರೆಗೆ ನಡೆಯಲಿದೆ ಅದೇ ರೀತಿ, ಎಂ.ಇ / ಎಂ.ಟೆಕ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಒಟ್ಟು 767 ವಿದ್ಯಾರ್ಥಿಗಳು ಪಿಜಿಸಿಇಟಿ (PGCET) ಪರೀಕ್ಷೆ ಬರೆಯಲಿದ್ದು, ಪರೀಕ್ಷೆಯು ರೈಲು ನಿಲ್ದಾಣದ ಹತ್ತಿರದ ಪಿ.ಜೆ. ಬಡಾವಣೆಯಲ್ಲಿರುವ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಕೇಂದ್ರದಲ್ಲಿ ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ಜರುಗಲಿದೆ ಎಂದು ತಿಳಿಸಿದರು.

ನಿಯೋಜಿತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸಮರ್ಪಕ ಗಾಳಿ ಹಾಗೂ ಬೆಳಕು ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪರೀಕ್ಷೆಯು ಸುಗಮವಾಗಿ ನಡೆಯಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ ಎಂದರು.

ಎಂ.ಇ / ಎಂ.ಟೆಕ್ ಕೋರ್ಸ್‌ಗಳ ಪಿಜಿಸಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ನಾನ್-ಪ್ರೋಗ್ರಾಮೆಬಲ್ ಕ್ಯಾಲ್ಕುಲೇಟರ್‌ಗಳನ್ನು (Non-programmable calculators) ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯುಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಪಡೆಯುವ ಆಧುನಿಕ ವ್ಯವಸ್ಥೆಯನ್ನು ಮಾಡಲಾಗಿದ್ದು, ಕೊಠಡಿ ಮೇಲ್ವಿಚಾರಕರಿಗೆ ಈ ಕುರಿತು ಅಗತ್ಯ ತರಬೇತಿ ನೀಡಲಾಗಿದೆ.  ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ಪಾರದರ್ಶಕತೆಗಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳ ಮೂಲಕ ಕಡ್ಡಾಯವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು ಎಂದು ತಿಳಿಸಿದರು.

ಪರೀಕ್ಷೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಕಂದಾಯ, ಪೊಲೀಸ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಾರಿಯ ಪರೀಕ್ಷೆಗೆ ಪ್ರಾಧಿಕಾರದ. https://cetonline.karnataka.gov.in/kea/indexnew ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಿರುತ್ತದೆ. ನಿಯಮಗಳ ಉಲ್ಲಂಘನೆಗೆ ಅವಕಾಶವಿರುವುದಿಲ್ಲವೆಂದರು.

Leave a Reply

Your email address will not be published. Required fields are marked *