ದಾವಣಗೆರೆ: ನಗರದ ನಿಟುವಳ್ಳಿಯ ದುರ್ಗಾಂಬಿಕಾ ಹೈಸ್ಕೂಲ್ ಸಮೀಪದ ಪವರ್ ಫಿಟ್ನೆಸ್ ಜಿಮ್ ನಲ್ಲಿ ಒಂದೇ ಕೋಮಿನ ಯುವತಿಯರು ಮತ್ತು ಮಹಿಳೆಯರ ಟಾರ್ಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪ ಎದುರಿಸುತ್ತಿರುವ ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂಥವರನ್ನು ಜಿಲ್ಲೆಯಿಂದಲೇ ಗಡೀಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಯುವತಿಯರಿಗೆ ನೀಡಿರುವ ಕಿರುಕುಳ ಮತ್ತು ಹಾಕಿರುವ ಬೆದರಿಕೆ ಕೇಳಿದರೆ ಎಂಥವರಿಗಾದರೂ ಆಕ್ರೋಶ ಬರುತ್ತದೆ. ಪೊಲೀಸರು ದೂರು ಕೊಟ್ಟಿಲ್ಲ ಎಂಬ ಕಾರಣಕ್ಕೆ ಆರೋಪಿ ತಪ್ಪಿಸಿಕೊಳ್ಳಲು ಬಿಡಬಾರದು. ಮುಂದೆ ಇಂಥ ಕೃತ್ಯ ಎಸಗುವವರಿಗೆ ಎದೆಯಲ್ಲಿ ನಡುಕ ಬರುವಂತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಂಭೀರವಾಗಿ ಈ ಪ್ರಕರಣ ಪರಿಗಣಿಸಿ ಕ್ರಮ ಕೂಡಲೇ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಎಲ್ಲಾ ಜಿಮ್ ಗಳ ಮಾಲೀಕರು, ತರಬೇತುದಾರರ ಹಿನ್ನೆಲೆ ಮಾಹಿತಿ ಕಲೆ ಹಾಕುವ ಜೊತೆಗೆ ಸರ್ಟಿಫಿಕೆಟ್ ಪಡೆದಿದ್ದಾರೋ ಇಲ್ಲವೋ, ಜಿಮ್ ತೆರೆಯಲು ಅನುಮತಿ ಪಡೆದಿರುವ ಕುರಿತಂತೆ ಮಾಹಿತಿ ಪಡೆಯಬೇಕು. ಪ್ರತಿ ಜಿಮ್ ಗಳಲ್ಲಿಯೂ ಮಹಿಳೆಯರು ಮತ್ತು ಯುವತಿಯರು ಫಿಟ್ನೆಸ್ ಗೆ ಬಂದರೆ ಕಡ್ಡಾಯವಾಗಿ ಮಹಿಳಾ ತರಬೇತುದಾರರೇ ಇರಬೇಕು ಎಂಬ ಆದೇಶ ಹೊರಡಿಸಬೇಕು. ಆಗ ಮಾತ್ರ ಇಂಥ ಘೋರ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಒಂದೇ ಕೋಮಿನ ಯುವತಿಯರು, ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿ, ಬೆದರಿಕೆ ಹಾಕಿದವನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ತಪ್ಪು ಯಾರೇ ಮಾಡಿರಲಿ, ಶಿಕ್ಷೆ ಆಗಬೇಕೆಂದು ಕಾನೂನು ಹೇಳುತ್ತದೆ. ಇಂಥ ಗಂಭೀರ ಪ್ರಕರಣದ ಬಗ್ಗೆ ಮುತುವರ್ಜಿ ವಹಿಸಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಿ. ಅದನ್ನು ಬಿಟ್ಟು ಬೇಕಾಬಿಟ್ಟಿ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕು ಎಂದು ರಾಜನಹಳ್ಳಿ ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. 

Leave a Reply

Your email address will not be published. Required fields are marked *