ಹೊನ್ನಾಳಿ: ಇತ್ತೀಚಿನ ದಿನಗಳಲ್ಲಿ ಮಾನವನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಡೆಯುತ್ತಿರುವ ಅತಿಯಾದ ದೌರ್ಜನ್ಯ ಮತ್ತು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ, ಸ್ಥಳೀಯ ‘ಭಾರತೀಯ ವಿದ್ಯಾ ಸಂಸ್ಥೆ’ಯ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿದರು.
ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಹಸ್ತಪ್ರತಿ ಹಾಗೂ ವಿವಿಧ ಜಾಗೃತಿ ಭಿತ್ತಿಪತ್ರಗಳನ್ನು (ಪ್ಲೇಕಾರ್ಡ್) ಕೈಯಲ್ಲಿ ಹಿಡಿದು, ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸುವ ಪ್ರಮುಖ ಘೋಷಣೆಗಳನ್ನು ಕೂಗಿದರು. “ಪ್ಲಾಸ್ಟಿಕ್ ತ್ಯಜಿಸಿ – ಪರಿಸರ ಉಳಿಸಿ”, “ಪ್ರಾಣಿಗಳೂ ನಮ್ಮಂತೆ ಜೀವಿಗಳು, ಅವುಗಳಿಗೆ ಕಿರುಕುಳ ನೀಡದಿರಿ”, “ನೀರು ಅತ್ಯಮೂಲ್ಯ – ಮಿತವಾಗಿ ಬಳಸಿ”, “ಸ್ವಚ್ಛತೆ ಕಾಪಾಡಿ – ಪ್ರಕೃತಿಯೊಂದಿಗೆ ಹೆಜ್ಜೆ ಹಾಕಿ” ಎಂಬಿತ್ಯಾದಿ ಸಮಾಜಮುಖಿ ಸಂದೇಶಗಳನ್ನು ಸಾರುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಪ್ರಕೃತಿಯನ್ನು ಮಲಿನಗೊಳಿಸದೆ, ಸ್ವಾರ್ಥ ಮನೋಭಾವ ಬಿಟ್ಟು ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು ಎಂಬ ಜಾಗೃತಿಯನ್ನು ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಯಶಸ್ವಿಯಾಗಿ ತಲುಪಿಸಿದರು.
ಈ ಜಾಗೃತಿ ಜಾಥಾದಲ್ಲಿ ಸಂಸ್ಥೆಯ ನಿರ್ದೇಶಕರಾದ ಹಾಲೇಶ್ ಕುಂಕೋದ್, ಶಿಕ್ಷಕರಾದ ಗಿರೀಶ್ ನಾಡಿಗ್, ಮಂಜಪ್ಪ ಎಲ್., ಶಿಕ್ಷಕಿಯರಾದ ರುಕ್ಮಿಣಿ, ನಾಗಮ್ಮ, ಅಶ್ವಿನಿ, ಶಶಿಕಲಾ ಸೇರಿದಂತೆ ಶಾಲೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡಿದರು.

