ಹೊನ್ನಾಳಿ: “ಚಿತ್ರಕಲಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮತ್ತು ಪ್ರೋತ್ಸಾಹ ದ್ವಿಗುಣಗೊಳ್ಳುತ್ತದೆ” ಎಂದು ಸಂಸ್ಥೆಯ ಖಜಾಂಚಿ ಸೋಮಶೇಖರಪ್ಪ ಕೆ, ಅಭಿಪ್ರಾಯಪಟ್ಟರು.
ಇಲ್ಲಿನ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಮುತ್ತೂಟ್ ಫಿನ್ ಕಾರ್ಪ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಶನಿವಾರ ವಿಶೇಷ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತಮ್ಮ ಮನಮೋಹಕ ಕಲಾಕೃತಿಗಳ ಮೂಲಕ ಗಮನ ಸೆಳೆದರು.
ಮುತ್ತೂಟ್ ಫಿನ್ ಕಾರ್ಪ್ ಮ್ಯಾನೇಜರ್ ಚೆನ್ನೇಶ್ ಮಾತನಾಡಿ, “ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಚಿತ್ರ ಬಿಡಿಸಿದ ಮೂರು ವಿದ್ಯಾರ್ಥಿಗಳಿಗೆ ಮುಖ್ಯ ಬಹುಮಾನ ಹಾಗೂ 18 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಎಚ್ ಎಂ ಅರುಣ್ ಕುಮಾರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುನೀತ್ ಎಂ ಜೆ, ಬ್ಯಾಂಕಿನ ಸಿಬ್ಬಂದಿಯಾದ ಗೋವಿಂದ, ವೆಂಕಟೇಶ್ ಹಾಗೂ ಕಿರಣ್, ಮತ್ತು ಶೋಭಾ, ಅನುಷಾ, ಗಿರೀಶ್ ನಾಡಿಗ್, ಸಚಿನ್, ಅಶೋಕ್, ಪರಶುರಾಮ್ ರಾವ್, ಸಂಜಯ್ ಹಾಗೂ ಸತೀಶ್ ಬಂಗೇರ ಉಪಸ್ಥಿತರಿದ್ದರು.

