ದಾವಣಗೆರೆ , ಸೆಪ್ಟೆಂಬರ್ 02 : ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಸೆಪ್ಟಂಬರ್ 05 ರಂದು ಏರ್ಪಡಿಸಿರುವ ಜನಸೇವಾ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳು ಒಂದಾಗಿ, ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಸಮಗ್ರ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.

ಅವರು ಬುಧವಾರ ವಿಡಿಯೋ ಸಂವಾದ ಮೂಲಕ ಜನಸೇವಾ ಕಾರ್ಯಕ್ರಮದ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಕರಪತ್ರಗಳನ್ನು ಪ್ರತಿ ಮನೆಗೂ ತಲುಪಿಸುವಂತೆ ವ್ಯವಸ್ಥೆ ಮಾಡಬೇಕು, ಕಾರ್ಯಕ್ರಮದಲ್ಲಿ ಸೇವಾ ಸಿಂಧು, ಐಪಿಜಿಆರ್‌ಎಸ್ ಹಾಗೂ ಇತರ ಆಡಳಿತಾತ್ಮಕ ಸೇವೆಗಳಿಗಾಗಿ ಒಟ್ಟು 15 ವಿಶೇಷ ಕೌಂಟರ್‌ಗಳನ್ನು ತೆರೆದು ಪಿಂಚಣಿ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಸ್ವೀಕೃತಿಯಾದ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು 7 ದಿನಗಳ ಒಳಗಾಗಿ ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಆದೇಶ ಹೊರಡಿಸಲು ಕ್ರಮ ವಹಿಸಲಾಗುತ್ತದೆ, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು , ಉಪಹಾರ ಆಸನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ , ಯುವನಿಧಿ ಮತ್ತು ಅನ್ನಭಾಗ್ಯ ಸೇರಿದಂತೆ ಕಂದಾಯ ಇಲಾಖೆ , ಜಿಲ್ಲಾ ಪಂಚಾಯಿತಿ ,ಆರೋಗ್ಯ , ತೋಟಗಾರಿಕೆ, ಕೃಷಿ ಇಲಾಖೆ ಸ್ಟಾಲ್ ಗಳನ್ನು ತೆರೆದು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲು ಕ್ರಮವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಹೊನ್ನಾಳಿ ಉಪ ವಿಭಾಗಾಧಿಕಾರಿ ಚನ್ನಪ್ಪ , ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತಾ ಹೊಸಗೌಡರ್, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
