ಹೊನ್ನಾಳಿ: ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗ ಶ್ರೀಕೃಷ್ಣನಂತೆ ಆಗಬೇಕು ಎಂಬ ಆಶಯ ಇರುತ್ತದೆ. ಕೃಷ್ಣನ ತುಂಟಾಟವನ್ನು ಸವಿಯುವುದರ ಜೊತೆಗೆ ಅವನ ಆದರ್ಶ ಹಾಗೂ ಲೌಕಿಕ ಗುಣಗಳನ್ನು ಮಕ್ಕಳು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯ ಎಂದು ವಿಜ್ಞಾನ ಸಂಘದ ಅಧ್ಯಕ್ಷೆ ಡಾ. ಶಕುಂತಲ ರಾಜಕುಮಾರ್ ಹೇಳಿದರು.
ಇಲ್ಲಿನ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶ್ರೀಕೃಷ್ಣ ಜನ್ಮಾಷ್ಟಮಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ರಾಧಾ-ಕೃಷ್ಣರ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಮಕ್ಕಳ ಮುದ್ದು ಮುಖ ಹಾಗೂ ವೇಷಭೂಷಣಗಳು ನೆರೆದಿದ್ದವರ ಗಮನ ಸೆಳೆದವು. ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಕೃಷ್ಣನ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಚ್. ಲಿಂಗಯ್ಯ, ಸಹಕಾರ್ಯದರ್ಶಿ ಗಣೇಶ್ ಕೆ., ಖಜಾಂಚಿ ಸೋಮಶೇಖರಪ್ಪ ಕೆ, ನಿರ್ದೇಶಕರಾದ ಅರುಣ್ ಕುಮಾರ್ ಎಚ್.ಎಂ., ಹಾಲೇಶ್ ಕುಂಕೋದ್, ರೂಪಾ ಕರಿಸಿದ್ದಪ್ಪ, ಸುರೇಶ್ ಶೆಟ್, ಹೆಚ್ ಎನ್ ಗುರುದತ್ತ ಹಾಗೂ ಶಿಕ್ಷಕರಾದ ರುಕ್ಮಿಣಿ, ಶಶಿಕಲಾ, ಗಿರೀಶ್, ನಾಗಮ್ಮ, ತಿಮ್ಮೇಶ್, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

