ಎಲ್ಲಾ ಶಿಕ್ಷಕರು ಪದವಿಯಲ್ಲಿ ಓದಿದ ವಿಷಯಗಳನ್ನು ಬೋಧಿಸುತ್ತಾರೆ. ದಾವಣಗೆರೆ ದಕ್ಷಿಣ ವಲಯದ ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ T. ಸುರೇಶ್ ಅವರು ಶಾಲೆಯಲ್ಲಿ ಶಿಕ್ಷಕರ ಕೊರತೆ /ರಜೆ ಇದ್ದಲ್ಲಿ ಆ ಶಿಕ್ಷಕರು ಬೋಧಿಸುವ ವಿಷಯವನ್ನು ಬೋಧಿಸುತ್ತಾರೆ. ಹೀಗೆ ಸಂದರ್ಭನುಸಾರ ಅವಶ್ಯಕತೆ ಬಿದ್ದಲ್ಲಿ ಆರೂ ವಿಷಯಗಳನ್ನು ಬೋಧಿಸುವ ನೈಪುಣ್ಯತೆ ಹೊಂದಿದ್ದಾರೆ. ಈ ರೀತಿಯ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಇರುವುದು ತುಂಬಾ ಅಪರೂಪ. ಅವರನ್ನು ಮಾತನಾಡಿಸಿದರೆ ಅದು ವಿಶೇಷತೆಯೇನಲ್ಲ, ಕೇವಲ ಬದ್ದತೆ ಮಾತ್ರ ಎನ್ನುತ್ತಾರೆ. ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಗೆ 2020ರಲ್ಲಿ ಕರ್ತವ್ಯಕ್ಕೆ ಹಾಜರಾದ ಇವರಿಗೆ, ಪ್ರತಿವರ್ಷ ನಡೆಯುವ ಬಡ್ತಿ ಮತ್ತು ವರ್ಗಾವಣೆಯ ಕಾರಣದಿಂದ ವರ್ಷದ ಮಧ್ಯದಲ್ಲೇ ಶಿಕ್ಷಕರ ಕೊರತೆ ಉಂಟಾಯಿತು. ವರ್ಗಾವಣೆಯ ಮೂಲಕ ಶಿಕ್ಷಕರು ಬರಲಿಲ್ಲ; ಅತಿಥಿ ಶಿಕ್ಷಕರೂ ಸಿಗಲಿಲ್ಲ. ಆಗ ತೆಗೆದುಕೊಂಡ ನಿರ್ಧಾರವೇ ಎಲ್ಲಾ ವಿಷಯಗಳ ಬೋಧನೆ.

ಇವರ ಈ ವಿಶೇಷತೆಯನ್ನು ಪರಿಗಣಿಸಿದ ದಾವಣಗೆರೆ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳವರು 2026ರಲ್ಲಿ ಗಣರಾಜ್ಯೋತ್ಸವದಂದು ದಾವಣಗೆರೆ ಜಿಲ್ಲೆಯ ಮಾನ್ಯ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಂದ ಸನ್ಮಾನ ಮಾಡಿಸಿ ಗೌರವಿಸಿದ್ದು ಇಲ್ಲಿ ಉಲ್ಲೇಖನೀಯ.

T. ಸುರೇಶ್ ಅವರು ಬೋಧನೆ ಗೆ ಮಾತ್ರ ಸೀಮಿತರಾದವರಲ್ಲ. ಅವರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿರುವ ಕಲಾವಿದರೂ ಹೌದು. ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಬಲ್ಲ ಉತ್ತಮ ಗಾಯಕರು. ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಹಾಡು ಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲ ಅವರು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವನ ಹಾಗೂ ನಾಟಕಗಳನ್ನು ಬರೆಯುವ ಅಭ್ಯಾಸ ಹೊಂದಿರುವ ಸುರೇಶ್ 2000ನೇ ಇಸವಿಯಲ್ಲಿ “ಮೌನಗೀತೆ” ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಿದ್ದಾರೆ. 2013ರಲ್ಲಿ “ಆವಿಷ್ಕಾರ”, 2015ರಲ್ಲಿ “ಇಸ್ರೋ, ನಮ್ಮ ಹೆಮ್ಮೆ” , 2015ರಲ್ಲಿ “ನೀನೇಕೆ ಗೆಲ್ಲಲಾರೆ ” ಹಾಗೂ 2016ರಲ್ಲಿ “ನೀನನ್ನ ನೇನನ್ನೂ” ಎಂಬ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಸೇವೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದಾರೆ. ಅನೇಕ ಮಾಸಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ.
ಆವಿಷ್ಕಾರ ವೆಂಬ ಕೃತಿಯು ವರ್ಷದ 365 ದಿನಗಳಲ್ಲಿನ ವಿಜ್ಞಾನಿಗಳ ವಿಶೇಷ ಪರಿಚಯದ ಕೃತಿ (IISC) ನ ಪ್ರಸಿದ್ಧ ವಿಜ್ಞಾನಿ ಶ್ರೀ ಡಾ || ಹರೀಶ್ ಭಟ್ ರವರಿಂದ ಮುನ್ನುಡಿ,ಭಾರತ ರತ್ನ ಸರ್ವಶ್ರೇಷ್ಠ ವಿಜ್ಞಾನಿ ಸಿ ಎನ್ ಆರ್ ರಾವ್ ರವರಿಂದ ಅಭಿನಂದನಾ ಪತ್ರ. ಕರ್ನಾಟಕ ಘನ ಸರ್ಕಾರದ ಮಾನ್ಯ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ವಿತರಿಸುವಂತೆ ಮಾನ್ಯ ಆಯುಕ್ತರಿಗೆ ಆದೇಶಿಸಲ್ಪಟ್ಟ ಕೃತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹20,000 ಬಹುಮಾನ ಪಡೆದ ಕೃತಿಯಾಗಿದೆ. ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಂದ ಪ್ರಶಂಸೆ ಪಡೆದಿರುವುದಲ್ಲದೆ, ಅನೇಕ ಗೌರವಾನ್ವಿತರು ಮೆಚ್ಚಿರುವ ಕೃತಿ ಬರೆದವರು ಈ ಸುರೇಶ್.

ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಗಳು, ಇನ್‌ಸ್ಪೈರ್ ಅವಾರ್ಡ್ಸ್ ಸ್ಪರ್ಧೆಗಳು, ಕ್ವಿಜ್ ಕಾರ್ಯಾಗಾರ (ಸಹಪಠ್ಯ ಚಟುವಟಿಕಾ ಸ್ಪರ್ಧೆ) ಮುಂತಾದ ವಿವಿಧ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸಹ ಕಾರ್ಯ ನಿರ್ವಹಿಸಿರುವುದು ಇವರ ಹೆಗ್ಗಳಿಕೆ.
ಬಾಂಬೆ ಯ ಜವಾಹರಲಾಲ್ ನೆಹರು ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಭೌತಶಾಸ್ತ್ರದ ವಿಶೇಷ ಕಾರ್ಯಾಗಾರದಲ್ಲಿ ದಾವಣಗೆರೆ ಯನ್ನು ಪ್ರತಿನಿಧಿಸಿದ ಶಿಕ್ಷಕರಾಗಿದ್ದಾರೆ. ಸಂಕೀರ್ಣವಾದ ಯೋಗಾಭ್ಯಾಸ ಗಳನ್ನು ಪ್ರದರ್ಶಿಸುವ ಯೋಗಪಟುವಾಗಿಯೂ ಗುರುತಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಮಾರ್ಗದರ್ಶಿ ಶಿಕ್ಷಕರಾಗಿ, ತೀರ್ಪುಗಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
T. ಸುರೇಶ್ ಅವರು ಒಬ್ಬ ಕಲಾವಿದ, ಗಾಯಕ, ಸಂಪನ್ಮೂಲ ಶಿಕ್ಷಕ, ಕವಿ, ಸಾಹಿತಿ, ಯೋಗಪಟು ಹಾಗೂ ಸಂವಹನಕಾರರು. ಅಲ್ಲದೆ, ಇಲಾಖೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬುದಕ್ಕೆ 2020–21ರಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಚುನಾವಣೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ.
ಈಗ ಅಣಬೇರು ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ₹60 ಲಕ್ಷದ ಕಾಮಗಾರಿಗಳನ್ನು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಕೊಡುಗೆಗಳನ್ನು ಶಾಲೆಗೆ ಕೊಡಿಸಿದ್ದಾರೆ. ಅಗತ್ಯವಿದ್ದಾಗಲೆಲ್ಲ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಶಾಲೆ ಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿರುವ ಇವರ ಸೇವೆ ಅನುಕರಣೀಯವಲ್ಲವೇ………?

ವರದಿ : ಸಿ ಜಿ ಜಗದೀಶ್ ಕೂಲಂಬಿ.
ಅಧ್ಯಾಪಕರು
ಸರ್ಕಾರಿ ಪ್ರೌಢಶಾಲೆ ಕುರ್ಕಿ
94493 20703

Leave a Reply

Your email address will not be published. Required fields are marked *