ದಾವಣಗೆರೆ , ಸೆಪ್ಟೆಂಬರ್‌ , 04 (ಕರ್ನಾಟಕ ವಾರ್ತೆ):ಜಿಲ್ಲೆಯ ನ್ಯಾಮತಿ ಹೊನ್ನಾಳಿ, ದಾವಣಗೆರೆ, ಚನ್ನಗಿರಿ  ತಾಲ್ಲೂಕನ್ನು ಬರ ತಾಲ್ಲೂಕು ಎಂದು ಘೋಷಿಸಲಾಗಿದ್ದು, ಪಶುಗಳಿಗೆ ಮೇವು ಕೊರತೆಯಾಗದಂತೆ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾಗದಂತೆ ಅಗತ್ಯ ಸಿದ್ದತೆ ಮಾಡುವ ಜೊತೆಗೆ, ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಮುನ್ನ ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ಸರಿಯಾಗಿ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ  ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್‌ ರವರು ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಎಸ್‌ಐಆರ್‌ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಸತಿನಿಲಯಗಳಲ್ಲಿ ಆಹಾರ ಮತ್ತು ನೈರ್ಮಲ್ಯ ಸ್ಥಿತಿ ಉತ್ತಮವಾಗಿರುವುದನ್ನು ಪರಿಶೀಲಿಸಬೇಕು. ಬರಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಪಾರದರ್ಶಕ ಹಾಗೂ ನಿಖರವಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕರಿಂದಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷಗಳಿಂದಾಗಲಿ ಯಾವುದೇ ರೀತಿಯ ಆಕ್ಷೇಪಣೆ ಹಾಗೂ ದೂರುಗಳು ಬರದಂತೆ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ವಹಿಸದೆ, ಸಾರ್ವಜನಿಕರಿಗೆ ಗೊಂದಲ ಉಂಟಾಗದ ರೀತಿಯಲ್ಲಿ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ಬಿಎಲ್‌ಒ ಮಟ್ಟದಿಂದ ಹಿಡಿದು ತಾಲೂಕು ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯ 16 ರಿಂದ 17 ಹಳ್ಳಿಗಳಿಗೆ ನೀರಾವರಿ ಪಂಪ್‌ಸೆಟ್‌ ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಭದ್ರಾ ನದಿಯಿಂದ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ನೀರು ಪೂರೈಕೆ ಸಹಜಸ್ಥಿತಿಗೆ ಬರಲಿದೆ ಎಂದರು.

ಜಗಳೂರು ಮತ್ತು ಹರಿಹರ ಸೇರಿದಂತೆ ಜಿಲ್ಲೆಯ 31,871 ರೈತರು ಬೆಳೆ ವಿಮೆ ನೋಂದಾಯಿಸಿಕೊಂಡಿದ್ದಾರೆ. ಉಪಗ್ರಹ (GSLR) ಸಮೀಕ್ಷೆ ಆಧಾರದ ಮೇಲೆ ಅರ್ಹ ರೈತರಿಗೆ ಪರಿಹಾರ ದೊರೆಯಲಿದೆ. ಕಳೆದ 15 ದಿನಗಳಿಂದ ಮಳೆ ಕ್ಷೀಣಿಸಿದ್ದು, ಮುಂದಿನ 10-15 ದಿನಗಳಲ್ಲಿ ಮಳೆಯಾಗದಿದ್ದರೆ ಮೆಕ್ಕೆಜೋಳ, ರಾಗಿ ಬೆಳೆಗಳಿಗೆ ಶೇ. 50 ರಷ್ಟು ಹಾನಿಯಾಗುವ ಆತಂಕವಿದೆ. ಪರಿಸ್ಥಿತಿಯನ್ನು ಕಂದಾಯ ಹಾಗೂ ಕೃಷಿ ಇಲಾಖೆ ನಿಕಟವಾಗಿ ಗಮನಿಸುತ್ತಿದೆ ಎಂದರು.

ಹಾವೇರಿ ಗಡಿಭಾಗದ ನೂತನ ಬ್ಯಾರೇಜ್‌ನ 52 ಕಂಬಗಳಿಂದಾಗಿ ನೀರು ಹಿಮ್ಮುಖವಾಗಿ ಹರಿದು 100 ಎಕರೆಗೂ ಹೆಚ್ಚು ಕೃಷಿ ಭೂಮಿ ಜಲಾವೃತಗೊಂಡಿದೆ. ಈ ಕುರಿತು ರೈತರು ಪ್ರತಿಭಟಿಸಿದ್ದು, ಸೂಕ್ತ ಪರಿಹಾರಕ್ಕೆ ಮನವಿ ಮಾಡಿದ್ದಾರೆ ಎಂದರು.

ದಾವಣಗೆರೆ ನಗರದ ಮುಂದಿನ 10 ವರ್ಷಗಳ ಅಭಿವೃದ್ಧಿಗೆ ನೂತನ ‘ಮಾಸ್ಟರ್ ಪ್ಲಾನ್’ ಅನುಮೋದನೆಗೊಂಡಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಂಡಿವೆ. ಅಂಗನವಾಡಿ ಸಿಬ್ಬಂದಿ ನೇಮಕಾತಿ 15 ದಿನಗಳಲ್ಲಿ ಮುಕ್ತಾಯವಾಗಲಿದೆ. ರೇಷ್ಮೆ ಇಲಾಖೆ ಜಾಗದಲ್ಲಿ ಬೀದಿ ನಾಯಿಗಳ ಆಶ್ರಯ ತಾಣ ನಿರ್ಮಾಣಕ್ಕೆ ಅನುಮತಿ ಕೋರಲಾಗಿದೆ ಎಂದರು.

ಲೋಕಾಯುಕ್ತ ತಂಡವು ಜಿಲ್ಲೆಯ ವಸತಿನಿಲಯಗಳು ಹಾಗೂ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಆಹಾರ ಮತ್ತು ನೈರ್ಮಲ್ಯ ಸ್ಥಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸಣ್ಣಪುಟ್ಟ ಶೌಚಾಲಯ ನಿರ್ವಹಣೆ ಕೊರತೆಗಳನ್ನು ಸರಿಪಡಿಸಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *