ಹೊನ್ನಾಳಿ: ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆಯುವುದು ಅತಿ ಕಠಿಣವಾದ ಕೆಲಸ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಶಾಲೆಯ ಅಭಿವೃದ್ಧಿಯನ್ನು ಕೈಗೊಂಡಾಗ ಆ ಕಿರೀಟ ತಾನಾಗಿಯೇ ಒಲಿದು ಬರುತ್ತದೆ. ಅಂತಹ ಮಹತ್ ಕಾರ್ಯವನ್ನು ಸದಾಶಿವಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಬಡಿಗೇರ ಅವರು ಮಾಡಿರುವುದು ಹೆಮ್ಮೆಯ ಸಾಧನೆಯಾಗಿದೆ ಎಂದು ಸಾಸ್ವೆಹಳ್ಳಿ ವಲಯದ ಶಿಕ್ಷಣ ಸಂಯೋಜಕರಾದ ರಂಗನಾಥ್ ಹೇಳಿದರು.
ತಾಲ್ಲೂಕಿನ ಸದಾಶಿವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ವತಿಯಿಂದ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಲ್ಲಿಕಾರ್ಜುನ್ ಬಡಿಗೇರ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿಯು ಅತ್ಯಂತ ಗೌರವಯುತವಾದ ವೃತ್ತಿಯಾಗಿದ್ದು, ಇದು ಒಂದು ಹೊಸ ಪೀಳಿಗೆಯನ್ನು ನಿರ್ಮಾಣ ಮಾಡುವ ಮಹತ್ತರ ಕಾರ್ಯವನ್ನು ಮಾಡುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಕ್ಲಸ್ಟರ್ ಸಿಆರ್‌ಪಿ ರಾಮಚಂದ್ರ, ಬಿಆರ್‌ಪಿ ಅರುಣ್ ಕುಮಾರ್, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

