ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಆತ್ಮಸ್ಥೈರ್ಯ ಬೆಳೆಸುತ್ತವೆ: ಟಿಪಿಇಒ ಜಗದೀಶ್
ಹೊನ್ನಾಳಿ: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿಯ ಜೊತೆಗೆ ಏಕಾಗ್ರತೆಯನ್ನು ಬೆಳೆಸುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಕ್ರೀಡಾ ಮನೋಭಾವವು ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಪ್ರಮುಖ ಅಂಶವಾಗಿದೆ ಎಂದು ಹೊನ್ನಾಳಿ ತಾಲೂಕು ಟಿಪಿಇಒ (TPEO) ಜಗದೀಶ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳು ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಹಂತದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಹಂತದಲ್ಲೂ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಯಶಸ್ಸು ಗಳಿಸಲಿ ಎಂದು ಅವರು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಪ್ಪ ಡಿ.ಮಾತನಾಡಿ, “ಇಂದಿನ ದಿನಗಳಲ್ಲಿ ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ಇದರೊಂದಿಗೆ ಸಹಬಾಳ್ವೆ ಮತ್ತು ಸಹಕಾರದಂತಹ ಹಲವು ಉತ್ತಮ ಮೌಲ್ಯಗಳನ್ನು ಕ್ರೀಡೆಯು ಕಲಿಸಿಕೊಡುತ್ತದೆ” ಎಂದರು.
ಸಮಾರೋಪ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕರುಗಳಾದ ಕುಮಾರ ನಾಯಕ್ ಎಸ್., ಮಹಮ್ಮದ್ ರಫಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಪ್ರಶಾಂತ್ ಎಂ., ಉಪಾಧ್ಯಕ್ಷೆ ಸವಿತಾ ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಜಯದೇವ್ ಎನ್., ತಾಲೂಕು ಕ್ರೀಡಾ ಯುವಜನ ಸಂಘದ ನಿರ್ದೇಶಕ ಕಾಳಿಂಗಪ್ಪ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಡಿಗ್, ದೈಹಿಕ ಶಿಕ್ಷಕರಾದ ಅಶೋಕ್, ಗೋವಿಂದಪ್ಪ, ಬಸವರಾಜ್, ಬಸವರಾಜಯ್ಯ, ಪರಶುರಾಮ್ ರಾವ್, ಸಚ್ಚಿನ್ ಸೇರಿದಂತೆ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *