ಹೊನ್ನಾಳಿ: “ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ವಿಷಯಗಳ ಜ್ಞಾನ ಹಾಗೂ ಅರಿವು ಹೊಂದುವುದು ಅತ್ಯಂತ ಅವಶ್ಯಕ. ನಮ್ಮ ನಾಡಿನ ಅಪರೂಪದ ಪ್ರಾಚ್ಯ ವಸ್ತುಗಳು, ಇತಿಹಾಸ ಹಾಗೂ ಸ್ಮಾರಕಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು” ಎಂದು ಹೊನ್ನಾಳಿ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ (ಬಿಆರ್ಸಿ) ತಿಪ್ಪೇಶಪ್ಪ ಎಂ. ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಹಯೋಗದೊಂದಿಗೆ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹೊನ್ನಾಳಿ ಇವರ ವತಿಯಿಂದ ಪಟ್ಟಣದ ನೌಕರರ ಭವನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ‘ಪ್ರಾಚ್ಯಪ್ರಜ್ಞೆ’ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಹೊನ್ನಾಳಿ ತಾಲೂಕಿನಲ್ಲಿ ಒಟ್ಟು 64 ಪ್ರೌಢಶಾಲೆಗಳಿವೆ. ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆಯ ಬಗ್ಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕು ಮಟ್ಟದ ಪ್ರಬಂಧ, ಭಾಷಣ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇಸಿಒ, ರಂಗನಾಥ್ ಮತ್ತು ಹನುಮಂತಪ್ಪ, ಬಿಆರ್ಪಿಗಳಾದ ಅರುಣ್ ಕುಮಾರ್ ಜಿ.ಕೆ, ಸುನಿಲ್ ಕುಮಾರ್ ಹಾಗೂ, ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಕಾಶ್, ತೀರ್ಪುಗರರಾದ ನೀಲೇಶ್ ಕುಮಾರ್, ಗಿರೀಶ್ ನಾಡಿಗ್, ಮೌನೇಶ್ ಹಾಗೂ ವೀರೇಶ್ ಡಿ.ಎಂ., ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಪ್ರೌಢಶಾಲಾ ಶಿಕ್ಷಕರು, ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

