ಜಾನಪದ ಕಲೆಗಳು ಎಂದೆಂದಿಗೂ ಪ್ರಸ್ತುತ: ಡಾ. ಎಚ್.ಪಿ. ರಾಜಕುಮಾರ್ ಅಭಿಮತ
ಹೊನ್ನಾಳಿ: “ಜಾನಪದ ಕಲೆಗಳು ಜನರ ಮನಸ್ಸನ್ನು ಗೆದ್ದು ಇಂದಿಗೂ ಪ್ರಸ್ತುತವಾಗಿವೆ. ಮೂಲತಃ ಮನರಂಜನೆಯ ಕಲೆಯಾಗಿ ಹುಟ್ಟಿಕೊಂಡ ಜಾನಪದ ಕಲೆಗಳು ಇಂದು ಜನಮಾನಸದಲ್ಲಿ ಅಲ್ಲಲ್ಲಿ ಜೀವಂತವಾಗಿವೆ” ಎಂದು ಭಾರತೀಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ಪಿ. ರಾಜಕುಮಾರ್ ತಿಳಿಸಿದರು.
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನರಸಗೊಂಡನಹಳ್ಳಿಯ ಗ್ರಾಮದ ಬಸವರಾಜ್ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕಾರ ಲಭಿಸಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ವತಿಯಿಂದ ಸಾಧಕರನ್ನು ಆಹ್ವಾನಿಸಿ ಸನ್ಮಾನಿಸಲಾಯಿತು. ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಈ ವಂಶಪಾರಂಪರೆಯ ಕಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಈ ಕುಟುಂಬದವರ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದೆ ಎಂದು ಅವರು ಶ್ಲಾಘಿಸಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ್ ಮಾತನಾಡಿ, “ನಮ್ಮ ವೃತ್ತಿ ಜೀವನದೊಂದಿಗೆ ಈ ಕಲೆಯನ್ನು ರೂಢಿಸಿಕೊಂಡು ಬಂದಿದ್ದೇವೆ. ಈ ಕಲೆ ನಮಗೆ ಅಪಾರ ಸಂತೋಷವನ್ನು ನೀಡುತ್ತದೆ. ರಾಜ್ಯದ ವಿವಿಧೆಡೆಯ ಜಾತ್ರೆಗಳು, ಸಮಾರಂಭಗಳು ಹಾಗೂ ಮಠ-ಮಾನ್ಯಗಳ ಕಾರ್ಯಕ್ರಮಗಳಿಗೆ ತಪ್ಪದೇ ನಮ್ಮನ್ನು ಆಹ್ವಾನಿಸುತ್ತಾರೆ. ವಂಶಪಾರಂಪರೆಯಾಗಿ ಬೆಳೆದು ಬಂದಿರುವ ಈ ಜಾನಪದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಕಲಾವಿದರಾದ ಬಸವರಾಜ್ ಮತ್ತು ಯೋಗೇಶ್ ಅವರು ತಮ್ಮ ವಿಶಿಷ್ಟ ಜಾನಪದ ಕಲಾ ಪ್ರದರ್ಶನವನ್ನು ನೀಡಿದರು. ಇವರ ಕಲಾ ನೃತ್ಯವನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರು ಭೇಷ್ ಎನಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಭಾರತೀಯ ವಿದ್ಯಾ ಸಂಸ್ಥೆಯ ಸಹಕಾರ್ಯದರ್ಶಿ ಕೆ. ಗಣೇಶ್, ಖಜಾಂಚಿ ಸೋಮಶೇಖರಪ್ಪ ಕೆ., ನಿರ್ದೇಶಕ ಹಾಲೇಶ್ ಕುಂಕೋದ್, ಡಾ. ಶಕುಂತಲಾ ರಾಜಕುಮಾರ್, ಜೆ. ದೇವಿರಮ್ಮ ಹಾಗೂ ಶಿಕ್ಷಕರಾದ ತಿಮ್ಮೇಶ್, ಪುನೀತ್, ಗಿರೀಶ್, ಪ್ರಿಯಾ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *