ಸೇವೆ ಒದಗಿಸಿ- ಬಿ.ಎ. ಬಸವರಾಜ

ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸೋಂಕಿತರಿಗೆ ನೀಡಲಾಗುವ ಊಟ, ಉಪಹಾರ,
ವೈದ್ಯಕೀಯ ನೆರವು, ಸ್ವಚ್ಛತೆ ಸೇರಿದಂತೆ ಎಲ್ಲ ಸೌಲಭ್ಯಗಳು
ಉತ್ತಮ ಗುಣಮಟ್ಟದ್ದಾಗಿರಬೇಕು, ಇದರಲ್ಲಿ ಯಾವುದೇ
ಲೋಪದೋಷಗಳಾಗಬಾರದು ಎಂದು ನಗರಾಭಿವೃದ್ಧಿ ಸಚಿವರು
ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ಅವರು ಅಧಿಕಾರಿಗಳಿಗೆ
ತಾಕೀತು ಮಾಡಿದರು.
ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿ-ಗತಿ ಹಾಗೂ ಕೈಗೊಳ್ಳಬೇಕಾದ
ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ
ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್
ಅವರು ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ನೀಡಿ, ಕಳೆದ
ವರ್ಷದಿಂದ ಇದುವರೆಗೂ 5.69 ಲಕ್ಷ ಪರೀಕ್ಷೆ ನಡೆಸಿದ್ದು, 42394 ಜನರಿಗೆ
ಸೋಂಕು ತಗುಲಿರುವುದು ದೃಢಪಟ್ಟಿದೆ. 37724 ಜನ
ಗುಣಮುಖರಾಗಿದ್ದು, 356 ಜನ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 4314
ಕೋವಿಡ್ ಸಕ್ರಿಯ ಪ್ರಕರಣಗಳಿವೆ. ದಾವಣಗೆರೆ-7812, ಹರಿಹರ-2051,
ಜಗಳೂರು-901, ಚನ್ನಗಿರಿ-2188, ಹೊನ್ನಾಳಿ-2120 ಹಾಗೂ ಹೊರಜಿಲ್ಲೆಯ-
534 ಸಕ್ರಿಯ ಪ್ರಕರಣಗಳಿವೆ. ಒಟ್ಟು 2068 ಜನ ಹೋಂ
ಐಸೋಲೇಷನ್‍ನಲ್ಲಿದ್ದು, 2246 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ಮೇ ತಿಂಗಳೊಂದರಲ್ಲೇ 16304 ಕೋವಿಡ್
ಪ್ರಕರಣಗಳು ದೃಢಪಟ್ಟಿವೆ. ಎರಡನೆ ಅಲೆಯಲ್ಲಿ ಅಂದರೆ
ಏಪ್ರಿಲ್‍ನಿಂದ ಈವರೆಗೆ 92 ಮರಣ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 83
ಆಂಬುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ಜಿಲ್ಲಾಡಳಿತದಿಂದ
ದಾವಣಗೆರೆಗೆ 02, ಎಲ್ಲ ತಾಲ್ಲೂಕುಗಳಿಗೆ ತಲಾ ಒಂದರಂತೆ ಒಟ್ಟು 07
ಆಂಬುಲೆನ್ಸ್ ಒದಗಿಸಲಾಗಿದೆ, ಮೃತ ದೇಹಗಳ ಸಾಗಣೆಗೆ
ಜಿಲ್ಲಾಡಳಿತದಿಂದ 02 ಹಾಗೂ ಮಹಾನಗರಪಾಲಿಕೆಯಿಂದ 01 ಮುಕ್ತಿ ವಾಹನ
ಕಾರ್ಯ ನಿರ್ವಹಿಸುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ,
ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ
ದಾಖಲಿಸಬೇಕು ಎಂದು ಕಳೆದ ಬಾರಿ ಕೈಗೊಂಡ ಸಭೆಯಲ್ಲಿ ಸೂಚನೆ
ನೀಡಲಾಗಿತ್ತು. ಆದರೆ ಇನ್ನೂ 2068 ಜನ ಹೋಂ ಐಸೋಲೇಷನ್‍ನಲ್ಲಿ

ಇದ್ದಾರೆ ಎಂದು ಹೇಳುತ್ತಿದ್ದೀರಿ ಎಂಬುದಾಗಿ ಅಸಮಾಧಾನ
ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ
ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸದ್ಯ 1200 ಜನರನ್ನು ದಾಖಲಿಸಿ ಅಗತ್ಯ
ಚಿಕಿತ್ಸೆ ಹಾಗೂ ಗುಣಮಟ್ಟದ ಊಟ ನೀಡಲಾಗುತ್ತಿದೆ. ಅಲ್ಲದೆ ಇಲ್ಲಿಗೆ ದೈಹಿಕ
ಶಿಕ್ಷಣ ಹಾಗೂ ಯೋಗ ಶಿಕ್ಷಣ ನೀಡುವುದರ ಜೊತೆಗೆ ಸೌಲಭ್ಯ ಇರುವ
ಕಡೆಗಳಲ್ಲಿ ಟಿ.ವಿ. ಸಂಪರ್ಕ ಕಲ್ಪಿಸಿ, ಮನರಂಜನೆಗೂ ವ್ಯವಸ್ಥೆ
ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟವರಿಗೆ ಇನ್ನು ಮುಂದೆ
ಹೋಂ ಐಸೋಲೇಷನ್‍ಗೆ ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್
ಕೇರ್ ಸೆಂಟರ್‍ಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ಸಚಿವರು
ಪ್ರತಿಕ್ರಿಯಿಸಿ, ಹೋಂ ಐಸೋಲೇಷನ್‍ನಲ್ಲಿ ವ್ಯವಸ್ಥೆ ಸರಿ ಇರುವುದಿಲ್ಲ,
ಮನೆಯಲ್ಲಿಯೇ ಇರುತ್ತೇವೆ ಎಂದು ಹೇಳಿ, ಹೊರಗಡೆ
ಅಡ್ಡಾಡುತ್ತಾ ಇತರರಿಗೂ ಸೋಂಕು ಹರಡಿಸುತ್ತಾರೆ, ಹೀಗಾಗಿ
ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸುವುದನ್ನು
ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಗೆ ಅಗತ್ಯ ಇರುವಷ್ಟು ಕೋವಿಡ್
ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಬೇಕು, ಇದಕ್ಕೆ ಅಗತ್ಯ
ನೆರವನ್ನು ಸರ್ಕಾರ ನೀಡುತ್ತದೆ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ
ಸೋಂಕಿತ ಬಂಧುಗಳಿಗೆ ಬಂಧನದ ರೀತಿಯ ಭಾವನೆ ಬರಬಾರದು,
ಅವರ ಮನೆಗಿಂತಲೂ, ಉತ್ತಮ ರೀತಿಯಲ್ಲಿ ಊಟ, ಉಪಹಾರ, ವೈದ್ಯಕೀಯ
ನೇರವು ಸೇರಿದಂತೆ ಎಲ್ಲ ವ್ಯವಸ್ಥೆ ಗುಣಮಟ್ಟದ ಸೇವೆ ನೀಡಬೇಕು,
ಸ್ವಚ್ಛತೆಯ ಕೊರತೆಯಾಗಬಾರದು, ಇಲ್ಲದಿದ್ದಲ್ಲಿ ಸಿಸಿಸಿ ಗೆ ಬರಲು
ಜನರು ಹಿಂದೇಟು ಹಾಕುವ ಸಾಧ್ಯತೆಗಳಿರುತ್ತವೆ ಎಂದರು. ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 21 ಕಪ್ಪು ಶಿಲೀಂದ್ರ
ಸೋಂಕು ಪ್ರಕರಣಗಳಿದ್ದು, ಸೋಂಕು ಚಿಕಿತ್ಸೆಗೆ ಅಗತ್ಯವಿರುವ
ಔಷಧಿ ಈಗಾಗಲೆ ಜಿಲ್ಲೆಗೆ ಪೂರೈಕೆಯಾಗಿದ್ದು, ಸೋಂಕಿತರಿಗೆ ಚಿಕಿತ್ಸೆ
ಪ್ರಾರಂಭಿಸಲಾಗಿದೆ ಎಂದರು.
ಗ್ರಾ.ಪಂ. ಕಾರ್ಯಪಡೆ ಸಕ್ರಿಯವಾಗಿರಲಿ : ಜಿ.ಪಂ. ಸಿಇಒ ಡಾ. ವಿಜಯ
ಮಹಾಂತೇಶ್ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಕೋವಿಡ್
ನಿಯಂತ್ರಣಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ. ಸೋಂಕಿತ
ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವುದು, ಕೋವಿಡ್ ಕೇರ್
ಸೆಂಟರ್‍ಗಳಿಗೆ ದಾಖಲಿಸುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ
ಕಾರ್ಯವನ್ನು ಗ್ರಾ.ಪಂ. ಕಾರ್ಯಪಡೆಗಳು ಸಮರ್ಪಕವಾಗಿ
ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ವಾರ 1815 ಜನ ಹೋಂ
ಐಸೋಲೇಷನ್‍ನಲ್ಲಿ ಇದ್ದರು, ಇದೀಗ 739 ಜನ ಮಾತ್ರ ಇದ್ದಾರೆ,
ಉಳಿದವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಲಾಗಿದೆ.
ಗ್ರಾಮಗಳ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆಗೆ ಆದ್ಯತೆ
ನೀಡಲಾಗುತ್ತಿದ್ದು, ಸ್ಯಾನಿಟೈಸ್ ಕೂಡ ಮಾಡಿಸಲಾಗುತ್ತಿದೆ ಎಂದರು.
ಸಚಿವರು ಮಾತನಾಡಿ, ಗ್ರಾಮಗಳಲ್ಲಿ ಈಗಲೂ ಜನರು ಮಾಸ್ಕ್ ಅನ್ನು
ಸಮರ್ಪಕವಾಗಿ ಧರಿಸುತ್ತಿಲ್ಲ, ಅಲ್ಲಲ್ಲಿ ಗುಂಪು ಗುಂಪಾಗಿ
ಸಂಚರಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಹೀಗಾಗಿ ಎಲ್ಲ
ಗ್ರಾ.ಪಂ. ಕೋವಿಡ್ ನಿಯಂತ್ರಣ ಕಾರ್ಯಪಡೆಗಳು ಸಕ್ರಿಯವಾಗಿ
ತೊಡಗಿಸಿಕೊಳ್ಳಬೇಕು. ಸೋಂಕಿತರಿಗೆ ಹೋಂ ಐಸೋಲೇಷನ್‍ಗೆ
ಅವಕಾಶ ಕಲ್ಪಿಸದೆ, ಕಡ್ಡಾಯವಾಗಿ ಸಿಸಿಸಿ ಗೆ ದಾಖಲಿಸಬೇಕು. ಕೋವಿಡ್
ತಡೆಗಟ್ಟುವ ಕುರಿತು ಗ್ರಾಮಗಳಲ್ಲಿ ಡಂಗುರ ಹಾಕುವ ಮೂಲಕ
ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.
03 ನೇ ಅಲೆ ತಡೆಗಟ್ಟಲು ಸಿದ್ಧತೆ : ಉಸ್ತುವಾರಿ ಸಚಿವರು ಮಾತನಾಡಿ,
ಕೋವಿಡ್‍ನ ಪ್ರಕರಣಗಳು ಸದ್ಯ ಇಳಿಮುಖವಾಗುತ್ತಿದ್ದು, ಬರುವ

ದಿನಗಳಲ್ಲಿ ಕೋವಿಡ್‍ನ 03ನೇ ಅಲೆ ಬರುವ ಬಗ್ಗೆ ಹಾಗೂ ಮಕ್ಕಳನ್ನು
ಹೆಚ್ಚು ಬಾಧಿಸುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಜಿಲ್ಲೆಯಲ್ಲಿರುವ ಮಕ್ಕಳ ತಜ್ಞ ವೈದ್ಯರ ಪಟ್ಟಿಯನ್ನು
ಈಗಲೆ ಸಿದ್ಧಪಡಿಸಿಕೊಳ್ಳಬೇಕು. ಜನರ ಪ್ರಾಣ ರಕ್ಷಣೆಗೆ ಆದ್ಯತೆ
ನೀಡುವ ಕೆಲಸ ಆಗಬೇಕು. ಮುಂದಿನ ವಾರ ಜಿಲ್ಲೆಯ ಎಲ್ಲ ಮಕ್ಕಳ
ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ, ಅವರಿಂದ ಸೂಕ್ತ ಸಲಹೆ,
ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಅಲ್ಲದೆ 03ನೇ ಅಲೆ
ತಡೆಗಟ್ಟಲು ಅಗತ್ಯ ಯೋಜನೆ ರೂಪಿಸಿ, ಅದರಂತೆ ಮುಂಜಾಗ್ರತಾ
ಕ್ರಮಗಳನ್ನು ಪ್ರಾರಂಭಿಸಬೇಕು, ಯಾವುದೇ
ನ್ಯೂನತೆಗಳಿಗೆ ಅವಕಾಶ ನೀಡದೆ, ನಿರ್ಲಕ್ಷ್ಯ ತೋರದೆ ಜಿಲ್ಲಾಡಳಿತ
ಸಜ್ಜಾಗಬೇಕು ಎಂದರು. ಪಾಲಕರೂ ಕೂಡ ಸಂಕಷ್ಟದ
ಸಂದರ್ಭದಲ್ಲಿ ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ
ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಈಗಾಗಲೆ ಜಿಲ್ಲೆಯಲ್ಲಿನ
ಮಕ್ಕಳ ತಜ್ಞ ವೈದ್ಯರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು,
ತಮ್ಮ ಅಧ್ಯಕ್ಷತೆಯಲ್ಲಿಯೇ ಮುಂದಿನವಾರ ಸಭೆ ನಡೆಸಲು
ಕ್ರಮ ಕೈಗೊಳ್ಳಾಗುವುದು ಎಂದರು.
ವೈದ್ಯರು, ಸಿಬ್ಬಂದಿಗಳ ನೇಮಕ : ರಾಜ್ಯ ಮಟ್ಟದಲ್ಲಿ ವೈದ್ಯರು ಹಾಗೂ
ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ದಾವಣಗೆರೆ ಜಿಲ್ಲೆಗೆ
ರಾಜ್ಯ ಮಟ್ಟದಿಂದ 23 ಎಂಬಿಬಿಎಸ್ ವೈದ್ಯರು ಹಾಗೂ 19 ತಜ್ಞ ವೈದ್ಯರನ್ನು
ನಿಯುಕ್ತಿ ಮಾಡಲಾಗಿದ್ದು, ಜಿಲ್ಲಾ ಮಟ್ಟದಲ್ಲಿಯೂ 24 ವೈದ್ಯರು ಹಾಗೂ
34 ಶುಶ್ರೂಷಕರ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ.
ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರು,
ಶುಶ್ರೂಷಕರ ಕೊರತೆ ನೀಗುವ ಮೂಲಕ ಸಮರ್ಪಕ
ವೈದ್ಯಕೀಯ ಸೌಲಭ್ಯ ಜಿಲ್ಲೆಗೆ ದೊರೆಯಲಿದೆ ಎಂದು ಸಚಿವ ಬಿ.ಎ.
ಬಸವರಾಜ ಹೇಳಿದರು.
ಮಳೆಗಾಲ ತೊಂದರೆಯಾಗದಿರಲಿ : ಶೀಘ್ರದಲ್ಲಿಯೇ ಮಳೆಗಾಲ
ಪ್ರಾರಂಭವಾಗಲಿದ್ದು, ಹೆಚ್ಚಿನ ಮಳೆಯಾಗಿ ಸಾರ್ವಜನಿಕರು ತೊಂದರೆ
ಅನುಭವಿಸಬಾರದು. ಹೀಗಾಗಿ ದಾವಣಗೆರೆ ಮಹಾನಗರಪಾಲಿಕೆ
ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ
ಆಯುಕ್ತರು ಜಂಟಿಯಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ,
ಹೆಚ್ಚಿನ ಮಳೆಯಾದಲ್ಲಿ ತೊಂದರೆ ಎದುರಾಗಬಹುದಾದ
ಸ್ಥಳಗಳನ್ನು ಗುರುತಿಸಿ, ಪರಿಹಾರಕ್ಕಾಗಿ ಕೈಗೊಳ್ಳಬಹುದಾದ
ಪರಿಹಾರ ಕ್ರಮಗಳನ್ನು ಈಗಲೆ ಮಾಡಿಕೊಳ್ಳಬೇಕು.
ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ವಾರು ಪರಿಶೀಲನೆ ನಡೆಸಿ,
ನ್ಯೂನತೆಗಳನ್ನು ಸರಿಪಡಿಸುವ ಕಾರ್ಯ ಪ್ರಾರಂಭಿಸಬೇಕು ಎಂದು
ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲಾಕ್‍ಡೌನ್ ವಿಸ್ತರಣೆಗೆ ಶಿಫಾರಸು : ಜೂ. 07 ರವರೆಗೆ ಲಾಕ್‍ಡೌನ್
ಜಾರಿಯಲ್ಲಿದ್ದು, ಕೋವಿಡ್ ಪ್ರಕರಣಗಳನ್ನು ಇನ್ನಷ್ಟು
ಕಡಿಮೆಗೊಳಿಸಲು ಲಾಕ್‍ಡೌನ್ ಅನ್ನು ಇನ್ನೂ 08 ದಿನಗಳ ಕಾಲ
ವಿಸ್ತರಣೆಯಾಗಬೇಕು. ಅಲ್ಲದೆ ಕಠಿಣ ಲಾಕ್‍ಡೌನ್ ಕ್ರಮಗಳನ್ನು
ಜಾರಿಗೊಳಿಸಬೇಕು. ಸದ್ಯ 2ನೇ ಅಲೆಯಲ್ಲಿ ಸಾಕಷ್ಟು ಸಾವು ನೋವು
ಕಂಡಿದ್ದೇವೆ. 03ನೇ ಅಲೆಯಂತೂ ಬರುವುದೇ ಬೇಡ ಎಂದು
ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಚನ್ನಗಿರಿ ಶಾಸಕರು
ಹಾಗೂ ಕೆಎಸ್‍ಎಸ್‍ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪ ಅವರು

ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಹಗಲಿರುಳೆನ್ನದೆ
ಶ್ರಮಿಸುತ್ತಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಲಾಕ್‍ಡೌನ್ ಅನ್ನು ಕನಿಷ್ಟ ಇನ್ನೂ 15
ದಿನಗಳ ಕಾಲ ವಿಸ್ತರಿಸಬೇಕು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ
ನೀಡುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು, ಈ ನಿಟ್ಟಿನಲ್ಲಿ ಜಿಲ್ಲೆಗೆ
ಸಮರ್ಪಕವಾಗಿ ಲಸಿಕೆ ಪೂರೈಕೆಯಾಗಬೇಕು ಎಂದರು.
ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ಕ್ಷೇತ್ರ
ವ್ಯಾಪ್ತಿಯ ಆಸ್ಪತ್ರೆಯಲ್ಲಿ ಕೋವಿಡ್ ಆಕ್ಸಿಜನ್ ಬೆಡ್ ಒದಗಿಸಬೇಕು
ಎಂದರು. ಪ್ರತಿಕ್ರಿಯಿಸಿದ ಸಚಿವರು, ಲಾಕ್‍ಡೌನ್ ಅನ್ನು ಜೂ. 07 ರ
ನಂತರ ಕನಿಷ್ಟ ಇನ್ನೂ ಒಂದು ವಾರ ಕಾಲ ವಿಸ್ತರಿಸುವಂತೆ ಹಾಗೂ
ದಾವಣಗೆರೆ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪ್ರಮಾಣದಲ್ಲಿ
ಲಸಿಕೆ ಪೂರೈಸುವಂತೆ ಮುಖ್ಯಮಂತ್ರಿಗಳಿಗೆ ಮನವಿ
ಮಾಡಲಾಗುವುದು. ಮಾಯಕೊಂಡದಲ್ಲಿ ಆಕ್ಸಿಜನ್ ಬೆಡ್
ವ್ಯವಸ್ಥೆಯನ್ನು ಮುಂದಿನ ವಾರ ನಾನೇ ಬಂದು ಉದ್ಘಾಟಿಸುತ್ತೇನೆ
ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಚನ್ನಗಿರಿ ಶಾಸಕ ಹಾಗೂ
ಕೆಎಸ್‍ಎಸ್‍ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪ, ಹೊನ್ನಾಳಿ ಶಾಸಕ
ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.
ರೇಣುಕಾಚಾರ್ಯ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ,
ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *