ಶಿವಮೊಗ್ಗ,ಜೂ.3: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ನೀಡಲಾಗುತ್ತಿರುವ ವಿಶೇಷ
ಭತ್ಯೆಯನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ವೈದ್ಯರು
ಕಳೆದ ಮೂರು ದಿನಗಳಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯದಲ್ಲಿ ತೊಡಗಿದ್ದಾರೆ.
ಸರ್ಕಾರಿ ವೈದ್ಯಾಧಿಕಾರಿಗಳಿಗೆ ಕೊರೋನಾ ಸಂದರ್ಭದಲ್ಲಿ ವಿಶೇಷ ಭತ್ಯೆ
ನೀಡಲು ಆದೇಶಿಸಲಾಗಿತ್ತು. ಕಾಲ ಕಾಲಕ್ಕೆ ನೀಡಲಾಗುವ ವೇತನ,ಭತ್ಯೆ ಹಾಗೂ
ಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಸಚಿವ
ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಹೀಗಿದ್ದು, ಆಯುಷ್ ವೈದ್ಯಾಧಿಕಾರಿಗಳನ್ನು ಹೊರತು
ಪಡಿಸಿ ವಿಶೇಷ ಭತ್ಯೆ ನೀಡಿರುವುದು ಅಸಮಂಜಸ, ಅಸಮರ್ಥನೀಯ ಎಂದು
ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ಹಾವಳಿಯ ಸಂದರ್ಭದಲ್ಲಿ ಸರ್ಕಾರವು ಪ್ರತಿಯೊಬ್ಬ
ಅಲೋಪತಿ, ಆಯುಷ್ ವೈದ್ಯಾಧಿಕಾರಿಗಳನ್ನು ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ
ನಿಯೋಜಿಸಿದೆ. ಯಾವೊಬ್ಬ ಆಯುಷ್ ವೈದ್ಯಾಧಿಕಾರಿಯು ಹಿಂಜರಿಯದೆ ತಮ್ಮ
ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ. ಕೋವಿಡ್ ಕೇರ್
ಕೇಂದ್ರ, ತಪಾಸಣಾ ಕೇಂದ್ರ, ಚಿಕಿತ್ಸಾ ಕೇಂದ್ರದಲ್ಲಿ ಅತ್ಯಂತ ದಕ್ಷತೆಯಿಂದ ಸೇವೆ
ಸಲ್ಲಿಸುತ್ತಿದ್ದಾರೆ.
ಕೋವಿಡ್ ಹಾವಳಿಯ ನಿಯಂತ್ರಣದಲ್ಲಿ ಆಯುಷ್ ವೈದ್ಯಾಧಿಕಾರಿಗಳು,
ಅರ್ಹನೀಯ ಕರ್ತವ್ಯ ನಿರ್ವಹಿಸಿರುವುದಕ್ಕೆ ದಾಖಲೆಗಳು ಇವೆ. ಹೀಗಿರುವಾಗ ಪ್ರತಿ
ಹಂತದಲ್ಲಿಯೂ ಕೆಲಸ ಕಾರ್ಯಗಳಿಗೆ ಆಯುಷ್ ವೈದ್ಯರನ್ನು ಬಳಸಿಕೊಂಡು
ವಿಶೇಷ ಭತ್ಯೆಯ ಪರಿಷ್ಕರಣೆಯಲ್ಲಿ ಮಾತ್ರ ಕೈ ಬಿಟ್ಟು ಆದೇಶ
ಹೊರಡಿಸಿರುವುದು ತಾರತಮ್ಯ ನೀತಿಯಾಗಿದೆ. ಆಯುಷ್ ವೈದ್ಯರು ಕೇವಲ
ಕರ್ತವ್ಯ ನಿರ್ವಹಣೆಗೆ ಮಾತ್ರ ಬೇಕು. ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಬೇಡ
ಎನ್ನುವುದು ನಿಜಕ್ಕೂ ನೋವಿನ ಸಂಗತಿ ಎಂದು ತಿಳಿಸಿದ್ದಾರೆ.
ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಈರಣ್ಣ,
ಡಾ.ಸಿ.ಎ.ಹಿರೇಮಠ್, ಡಾ.ಕುಮಾರ್ ಸಾಗರ್, ಡಾ.ಸತೀಶ್ ಆಚಾರ್ಯ, ಡಾ.ಶಶಿಕಾಂತ್,
ಡಾ.ಎ.ಎಸ್.ಪುಷ್ಪ, ಡಾ.ಎಸ್.ರಾಘವೇಂದ್ರ, ಡಾ.ಸತೀಶ್, ಡಾ.ಕಾಂತ್‍ರಾಜ್, ಡಾ.ರವಿರಾಜ್,
ಡಾ.ಹರ್ಷಪುತ್ರಾಯ, ಡಾ.ಎಸ್.ಹೆಚ್.ಲಿಂಗರಾಜ್, ಡಾ.ಸುರೇಂದ್ರ ಸೇರಿದಂತೆ ಅನೇಕ
ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ
ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *