ಕನ್ನಡ ಸಿನಿಮಾ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75 ವರ್ಷ) ಇಂದು (ಜೂನ್ 3) ಅಗಲಿದ್ದಾರೆ. ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು.
ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ಬಾಲಕೃಷ್ಣ, ನರಸಿಂಹರಾಜು ಮತ್ತು ದ್ವಾರಕೀಶ್ ಅವರೊಂದಿಗಿನ ಜಯಾರ ಪಾತ್ರಗಳು ಬಹು ಜನಪ್ರಿಯ. ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಅವರದು. 350ಕ್ಕೂ ಹೆಚ್ಚು ಸಿನಿಮಾಗಳು, ಹತ್ತಾರು ಧಾರಾವಾಹಿಗಳ ಸಾವಿರಾರು ಸಂಚಿಕೆಗಳಲ್ಲಿ ಅಭಿನಯಿಸಿದ್ದಾರೆ.
ಜಯಾ ಅವರ ತಂದೆ ಬಸಪ್ಪನವರು ರಂಗಭೂಮಿ ಕಲಾವಿದರು. ಪುತ್ರಿಯನ್ನು ನಟಿಯಾಗಿ ರೂಪಿಸಬೇಕೆನ್ನುವ ಇರಾದೆ ಅವರದಾಗಿತ್ತು. ತಂದೆಯ ಒತ್ತಾಸೆಯಂತೆ ಜಯಾ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿ’ಯಲ್ಲಿ ಪ್ರಹ್ಲಾದ, ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ನಟನೆ ಜೊತೆಗೆ ಸಂಗೀತ, ನೃತ್ಯ ಕಲಿತರು.
‘ಭಕ್ತ ಪ್ರಹ್ಲಾದ’ (1958) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಮದರಾಸಿನಲ್ಲಿದ್ದಾಗ ಹಲವಾರು ರೇಡಿಯೋ ನಾಟಕಗಳಲ್ಲೂ ಪಾಲ್ಗೊಂಡಿದ್ದರು. ಆಗ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ತಯಾರಾಗುತ್ತಿದ್ದುದು. ಕನ್ನಡ ಚಿತ್ರ ತಾರೆಯರು ಜೀವನೋಪಾಯಕ್ಕಾಗಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಕಟ್ಟಿದ್ದರು. ಬಿ.ಜಯಾ ಅವರು ಕೂಡ ಈ ತಂಡದ ಕಲಾವಿದೆಯಾಗಿ ರಾಜ್ಯದ ಹಲವೆಡೆ ನಾಟಕಗಳ ಪ್ರದರ್ಶನ ನೀಡಿದ್ದರು. 1983ರಲ್ಲಿ ‘ಕುಮಾರೇಶ್ವರ ನಾಟಕ ಸಂಘ’ ಕಟ್ಟಿದ ಬಿ.ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.
ದೈವಲೀಲೆ, ವಿಧಿ ವಿಲಾಸ, ಬೆಳ್ಳಿಮೋಡ, ನ್ಯಾಯವೇ ದೇವರು, ಚಿನ್ನದ ಗೊಂಬೆ, ಪ್ರತಿಜ್ಞೆ, ಮಹದೇಶ್ವರ ಪೂಜಾಫಲ, ಮಣ್ಣಿನ ಮಗ, ಶ್ರೀಕೃಷ್ಣ ದೇವರಾಯ, ಕುಲಗೌರವ, ಪೂರ್ಣಿಮಾ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ದೇವರು ಕೊಟ್ಟ ತಂಗಿ, ಗಂಧದ ಗುಡಿ, ಶುಭಮಂಗಳ, ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ… ಜಯಾ ಅವರ ಕೆಲವು ಪ್ರಮುಖ ಚಿತ್ರಗಳು. ‘ಮಹಾನ್ ಮರೆಗುಳಿಗಳು’ ಸರಣಿಯಿಂದ ಶುರುವಾದ ಅವರ ಕಿರುತೆರೆ ನಂಟು ಇತ್ತೀಚಿನವರೆಗೂ ಜಾರಿಯಲ್ಲಿತ್ತು.
‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

Leave a Reply

Your email address will not be published. Required fields are marked *