ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ಮುಕ್ತ ವಾತಾವರಣವನ್ನು ಸೃಷ್ಠಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಭಾಗರ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಆಯುಕ್ತರಾದ ಹೆಚ್.ಡಿ. ರಮೇಶಶಾಸ್ತ್ರಿ ಹೇಳಿದರು.
ಜೂನ್ 05 ರಂದು ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ಸ್ಕೌಟ್ ಭವನದಲ್ಲಿ ಏರ್ಪಡಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದೆ. ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ಶುದ್ಧವಾದ ಗಾಳಿ, ಬೆಳಕು, ಆಹಾರ ಮತ್ತು ನೀರು ಅವಶ್ಯಕವಾಗಿದೆ. ಆದರೆ ಮಾನವನು ನಗರೀಕರಣದ ಹೆಸರಿನಲ್ಲಿ ಪರಿಸರವನ್ನು ಮಾಲಿನ್ಯಯುಕ್ತವಾಗಿ ಮಾಡಿದ್ದಾನೆ. ಮನುಷ್ಯ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ನಿಸರ್ಗದ ಚಮತ್ಕಾರದ ಮುಂದೆ ಆತನ ಸಾಧನೆ ಶ್ಯೂನ್ಯ.
ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮತ್ತು ಜಲ ಸಂರಕ್ಷಣೆಯನ್ನು ಮಾಡುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಕಾಳಜಿಯನ್ನು ಬೆಳೆಸಬೇಕು. ಸಸಿ ನೆಡುವುದು, ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವುದು, ಬೀಜದುಂಡೆಗಳ ತಯಾರಿಕೆ ಹೀಗೆ ಇತ್ಯಾದಿ ಕಾರ್ಯಕ್ರಮದಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಪರಿಸರ ಕಾಳಜಿಯನ್ನು ಬೆಳೆಸಬಹುದಾಗಿದೆ.
ಈ ಕೋವಿಡ್ ಹಾವಳಿ ವೇಳೆಯಲ್ಲಿ ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಪರಿಸರ ದಿನಾಚರಣೆಯ ಧ್ಯೇಯ ವಾಕ್ಯವಾದ “ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸುವುದು” ನಮ್ಮೆಲ್ಲರ ಕರ್ತವ್ಯವಾಗಿರುವುದರಿಂದ ನಾವೆಲ್ಲರೂ ಸೇರಿ ಇಂದಿನ ವ್ಯವಸ್ಥೆಯನ್ನು ಮೊದಲಿನ ಹಾಗೇ ಮರುಸ್ಥಾಪಿಸುವಲ್ಲಿ ಪಣ ತೊಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಚುಡಾಮಣಿ ಈ. ಪವಾರ್, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಎ.ಎಸ್.ಓ.ಸಿ(ಗೈಡ್) ಭಾರತಿ ಡಯಾಸ, ಜಿಲ್ಲಾ ಸಹ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ಜಿಲ್ಲಾ ತರಬೇತಿ ಆಯುಕ್ತರು (ಗೈಡ್)ಕಾತ್ಯಾಯಿನಿ.ಸಿ.ಎಸ್, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ. ವಿಜಯ್ ಕುಮಾರ್, ಎಸ್.ಜಿ.ವಿ. ಕುಮಾರಿ ಸುಮಲತಾ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಾದ ಡಿ.ಎನ್.ನೂರ್ ಅಹಮ್ಮದ್, ರಾಜೇಶ್ ಎ.ವಿ, ಮಲ್ನಾಡ್ ಗುಂಪಿನ ಸದಸ್ಯರುಗಳು ಹಾಜರಿದ್ದರು.