ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಯ ಹೆಸರಿನಲ್ಲಿ ನೂರಾರು ಕೋಟಿ ಲೂಟಿ ನಡೆದಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.
‘ಪ್ರಜಾವಾಣಿ’ಯಲ್ಲಿ ಜೂನ್‌ 2ರ ಸಂಚಿಕೆಯಲ್ಲಿ ಪ್ರಕಟವಾದ ‘ತಾಂತ್ರಿಕ ಅರ್ಹತೆ ಪಡೆಯದ ಗುತ್ತಿಗೆದಾರನಿಗೆ ಕಾಮಗಾರಿ?’ ವರದಿಯನ್ನು ಉಲ್ಲೇಖಿಸಿ, ದಾಖಲೆಗಳ ಸಮೇತ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ಮೂಲಕ ಅನುಷ್ಠಾನಗೊಳಿಸಲಿರುವ ಈ ಕಾಮಗಾರಿ ಮತ್ತು ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ’ ಎಂದು ದೂರಿದರು.
‘ಟೆಂಡರ್‌ ಪ್ರಕ್ರಿಯೆಯ ತಾಂತ್ರಿಕ ಪರಿಶೀಲನೆ ಹಂತದಲ್ಲಿಯೇ ಅನರ್ಹಗೊಂಡ ಉದಯ್‌ ಶಿವಕುಮಾರ್‌ ಅವರ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಕಾಮಗಾರಿ ನೀಡಲು ಕೆಆರ್‌ಡಿಸಿಎಲ್‌ ಶಿಫಾರಸು ಮಾಡಿದೆ.
ಆ ಮೂಲಕ, ಕಪ್ಪು ಪಟ್ಟಿಗೆ ಸೇರಿದ ಈ ಕಂಪನಿಗೆ ಬಳ್ಳಾರಿ ರಸ್ತೆ, ತುಮಕೂರು ರಸ್ತೆಗಳಲ್ಲಿ ಹಲವು ಸಿಗ್ನಲ್ ಫ್ರೀ ರಸ್ತೆಗಳ ಗುತ್ತಿಗೆ ನೀಡಲಾಗಿದೆ. ತಕ್ಷಣ ಈ ಗುತ್ತಿಗೆಯನ್ನು ರದ್ದು ಮಾಡಬೇಕು. ಅಗತ್ಯ ಇರುವ ರಸ್ತೆಗೆ ಮಾತ್ರ ಟೆಂಡರ್ ಆಹ್ವಾನಿಸಬೇಕು’ ಎಂದು ಅವರು ಆಗ್ರಹಿಸಿದರು.
‘ರಸ್ತೆಗಳ ನಿರ್ಮಾಣಕ್ಕೆ ₹355 ಕೋಟಿಗೆ ಟೆಂಡರ್‌ ನೀಡಲಾಗಿದೆ. ನಿರ್ಮಾಣದ ಬಳಿಕ ಪ್ರತಿವರ್ಷ ₹ 150 ಕೋಟಿಯಂತೆ ನಿರ್ವಹಣೆಗೆ ಐದು ವರ್ಷಕ್ಕೆ ₹ 750 ಕೋಟಿ ಟೆಂಡರ್ ನೀಡಲಾಗಿದೆ. ಪ್ರತಿವರ್ಷ ರಸ್ತೆಗಳ ನಿರ್ವಹಣೆಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.
‘ನಗರ ವ್ಯಾಪ್ತಿಯಲ್ಲಿ ಅಧಿಕ ಸಾಂದ್ರತೆಯ ವಲಯಗಳಲ್ಲಿ ಶೇ 80ರಷ್ಟು ವಾಹನ ದಟ್ಟಣೆ ಇದೆ. ಇವುಗಳು ಸುಮಾರು 190 ಕಿ.ಮೀ ಉದ್ದವಿದೆ. ಈ ರಸ್ತೆಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ₹ 477.29 ಕೋಟಿ ಮೊತ್ತಕ್ಕೆ ₹650 ಕೋಟಿ ಹೆಚ್ಚು ಸೇರಿಸಲಾಗಿದೆ. ಒಟ್ಟು ₹ 1,120 ಕೋಟಿಗೆ ಅಂದಾಜು‍ ಪಟ್ಟಿ ತಯಾರಿಸಲಾಗಿದೆ’ ಎಂದು ಅವರು ಆರೋಪಿಸಿದರು.
‘ಗುತ್ತಿಗೆದಾರ ರಸ್ತೆ ನಿರ್ಮಿಸಿದ ಬಳಿಕ ಮೂರು ವರ್ಷ ನಿರ್ವಹಣೆ ಮಾಡಬೇಕು‌. ಗುತ್ತಿಗೆ ಹೆಸರಿನಲ್ಲಿ ಹಣ ಲೂಟಿ ಹೊಡೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದೆ. ರಸ್ತೆ ನಿರ್ಮಾಣಕ್ಕಿಂತ ನಿರ್ವಹಣೆಗೆ ಹೆಚ್ಚು ವೆಚ್ಚ ಮಾಡುವ ಮೂಲಕ ಲೂಟಿಗೆ ಮಾರ್ಗ ಕಂಡುಕೊಳ್ಳಲಾಗಿದೆ. ಬಿಬಿಎಂಪಿ ಅಧಿಕಾರಿಗಳು ವಿರೋಧಿಸಿದರೂ ಕೆಆರ್‌ಡಿಸಿಎಲ್ ಮೂಲಕ ಟೆಂಡರ್‌ ನೀಡಲಾಗಿದೆ’ ಎಂದೂ ಅವರು ಹೇಳಿದರು.
‘ಬಿಬಿಎಂಪಿಯವರು ನಾವೇ ರಸ್ತೆ ಕಾಮಗಾರಿ ಮಾಡುತ್ತೇವೆ ಎಂದು ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಕೆಆರ್‌ಡಿಸಿಎಲ್‌ಗೆ ವಹಿಸಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಈ ಅಕ್ರಮದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚಿಸಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ’ ಎಂದೂ ಹೇಳಿದರು.

Leave a Reply

Your email address will not be published. Required fields are marked *

You missed