ಕರೋನ ನಂತರ ಗ್ರಾಮಸ್ಥರು ನಗರಗಳಿಗೆ ಮರು ವಲಸೆ ಹೊರಟಿದ್ದಾರೆ, ನಾವು ಅದನ್ನ ತಡೆಯಲು ಗ್ರಾಮಗಳತ್ತ ಅಭಿವೃದ್ದಿಯನ್ನ ಕೊಂಡೊಯ್ಯಬೇಕು. ಉಪವಾಸ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಗ್ರಾಮದಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯವಾದ ಕೆಲಸ, ಅವರ ಹೊಟ್ಟೆ ಪಾಡಿನ ಬಗ್ಗೆ ಚಿಂತಿಸಿದಾಗ ಮಾತ್ರ, ಅವರನ್ನ ಹಳ್ಳಿಗಳಲ್ಲಿ ಇರಿಸಿಕೊಳ್ಳಬಹುದು, ಮಹಾತ್ಮ ಗಾಂಧೀಜಿಯವರ ಕನಸಿನ ಭಾರತವನ್ನ ನಾವು ಈಗ ಕಟ್ಟಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ಅಭಿವೃದ್ದಿ ಗ್ರಾಮಗಳತ್ತ ಸಾಗಲಿ” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗ ಗ್ರಾಮೀಣ ಉದ್ಯೋಗಗಳನ್ನ ಚೈತನ್ಯದಾಯಕವಾಗಿ ಮಾಡಬೇಕು, ಗ್ರಾಮಸ್ಥರ ಬದುಕಿನ ದಾರಿಯನ್ನು ಗ್ರಾಮದಲ್ಲೇ ಸೃಷ್ಟಿಸಿ ಕೊಡಬೇಕು, ಇದು ಒಬ್ಬರಿಂದ ಮಾಡುವ ಕೆಲಸವಲ್ಲ, ಎಲ್ಲರೂ ಕೈಜೋಡಿಸಿದರೆ ಬಹಳ ಸುಲಭ ಸಾಧ್ಯವಾದದ್ದು. ಕರೋನ ಯುದ್ಧದ ಕಾಲದ ಸಂಕಷ್ಟಕ್ಕೆ ಸಮನಾಗಿದೆ, ಇಂತಹ ಸಂಕಷ್ಟ ಕಾಲದಲ್ಲಿ ಜನರು ಪರಿವರ್ತನೆ ಮಾಡಿಕೊಳ್ಳುವ ಮನಸ್ಸು ಹೊಂದಿರುತ್ತಾರೆ, ಅಂತಹ ಸಂದರ್ಭದಲ್ಲಾದರೂ ನಾವು ಅವರನ್ನ ಜಾಗ್ರತಗೊಳಿಸಿ, ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಅವಕಾಶವನ್ನು ಕಲ್ಪಿಸಿಕೊಡಬೇಕು. ಜನರನ್ನು ಗ್ರಾಮೀಣ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುವಂತಹ ಕಾರ್ಯಕ್ರಮವನ್ನು ರೂಪಿಸಬೇಕು. ಕೋಟ್ಯಂತರ ರೂಪಾಯಿಗಳನ್ನು ನಾವು ನಗರಗಳಲ್ಲಿ ಕಾರ್ಖಾನೆಗಳಲ್ಲಿ ತೊಡಗಿಸುವ ಬದಲಾಗಿ, ಮನೆಮನೆಗಳಲ್ಲಿ, ಕುಟೀರಗಳಲ್ಲಿ, ಹಳ್ಳಿಗಳ ಗುಡಿಸಲುಗಳಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನ ಬಳಕೆ ಮಾಡುವುದರ ಬಗ್ಗೆ ಜಾಗೃತ ಗೊಳಿಸಬೇಕಾಗಿದೆ ಎಂದರು.
ಹಳೆಯ ಹುದ್ದೆಗಳನ್ನÀ ನಾವು ನವೀಕರಿಸಬೇಕಾಗಿದೆ, ಖಾದಿ ಉತ್ಪನ್ನಗಳ ಬಳಕೆ ಹೆಚ್ಚು ಮಾಡಬೇಕಾಗಿದೆ. ಅವಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕಾಗಿದೆ. ಹೆಚ್ಚು ಹೆಚ್ಚು ಸಂಶೋಧನೆಗಳು ಗ್ರಾಮೀಣ ಅಭಿವೃದ್ಧಿಯ ಕಡೆ ಆಗಬೇಕು. ಆದರೆ ನಾವು ನಗರಗಳತ್ತÀ ಮುಖ ಮಾಡಿಕೊಂಡು ಕುಳಿತಿದ್ದೇವೆ. ಕರೋನ ನಿವಾರಿಸಲು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಇಲ್ಲವಾದರೇ ಮತ್ತೆ ಮತ್ತೆ ನಾವು ಕರೋನಕ್ಕೆ ನಗರಗಳನ್ನ ತೆರೆದಿಟ್ಟು, ಮತ್ತೆ ಮತ್ತೆ ನಾವು ಗ್ರಾಮೀಣ ಜನರನ್ನು ಊರಿಗೆ ವಾಪಸ್ ಕಳಿಸುವಂತ ಸ್ಥಿತಿ ಬರಬಹುದು ಎಂದರು.
ಹಳ್ಳಿಗಳಲ್ಲಿ ಆಹಾರ ಸಾಮಗ್ರಿಗಳ ಸಂಸ್ಕರಣೆಯಿಂದ ಹಿಡಿದು, ಉಪ್ಪಿನ ಕಾಯಿ, ಸೆಂಡಿಗೆ, ಹಪ್ಪಳ, ಚಿಪ್ಸ್, ದಿನನಿತ್ಯ ಬಳಕೆಗೆ ಬೇಕಾದಂತಹ ವಸ್ತುಗಳನ್ನ, ಬಟ್ಟೆಗಳನ್ನ, ಹಳ್ಳಿಗಳಲ್ಲಿ ತಯಾರಿಸುವಂತಹ ಏರ್ಪಾಡು ಮಾಡಿ, ಗ್ರಾಮೀಣ ಮಹಿಳೆಯರನ್ನ, ಸುಸ್ಥಿತಿಯಲ್ಲಿರಲು ಅನುಕೂಲಕರವಾಗುವುದು. ಇದರ ಬಗ್ಗೆ ನಾವು ಈಗ ಚಿಂತಿತರಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್. ಎಸ್. ರಚನ ಮತ್ತು ಹೆಚ್. ಎಸ್. ಪ್ರೇರಣ, ಗಾಂಧಿಜೀಯವರಿಗೆ ಇಷ್ಟವಾದ ವೈಷ್ಣೋವ ಜನತೋ ತೇನೇ ಕಹಿಯಜೇ ಗೀತೆಗಳನ್ನ ಹಾಡಿ ಜನರನ್ನ ಜಾಗೃತಗೊಳಿಸಲಾಯಿತು. ಗ್ರಾಮೀಣ ಉದ್ಯೋಗದ ಸೂರ್ಯ ಎಂದ ಚರಕದ ಮಾದರಿ, ಬಿತ್ತಿ ಚಿತ್ರಗಳನ್ನ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುಮ ಕೆಂಚರೆಡ್ಡಿ, ತಾರಾ, ಗೀತಾ, ಶ್ರೀನಿವಾಸ, ಅಂಶುಲ್, ಕರಿಯಣ್ಣ, ಪ್ರದೀಪ್, ಮೇಘನ ಹಾಜರಿದ್ದರು.