ಹೊನ್ನಾಳಿ : ಯುವಕರು ದೇಶದ ಸಂಪತ್ತು, ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಿದ್ದು ಯಾರೂ ಗೊಂದಲಕ್ಕೆ ಎಡೆ ಮಾಡಿಕೊಡುವುದು ಬೇಡ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಯುವಕರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುತ್ತಿದ್ದು,ಜೂನ್ 21 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಿದ್ದು ಸಹಕಾರ ನೀಡುವಂತೆ ಮನವಿ ಮಾಡಿದರು.
ನಾನು ಕೊರೊನಾ ವಿಚಾರವಾಗಿ ರಾಜಕಾರಣ ಮಾಡುವುದಿಲ್ಲಾ, ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಈಗ ನನಗೆ ಅವಳಿ ತಾಲೂಕಿನ ಜನರ ಆರೋಗ್ಯ ಮುಖ್ಯ ಎಂದ ಶಾಸಕರು, ಈ ನಿಟ್ಟಿನಲ್ಲಿ ಹಗಲಿರುಳು ಸೇವೆ ಮಾಡುತ್ತಿದ್ದೇನೆ ಎಂದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಅವರಲ್ಲಿ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಅಲ್ಲೇ ವಾಸ್ತವ್ಯ ಮಾಡುತ್ತಿದ್ದು, ಸೋಂಕಿತರು ಗುಣಮುಖರಾಗಿ ಹೋಗುವವರೆಗೂ ಕೋವಿಡ್ ಕೇರ್ ಸೆಂಟರ್‍ನಲ್ಲೇ ವಾಸ್ತವ್ಯ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು.
ಕೋವಿಡ್ ವಾರ್ಡಗಳಿಗೆ ಶಾಸಕರ ಭೇಟಿ : ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡಗಳಿಗೆ ಭೇಟಿ ನೀಡಿದ ಶಾಸಕರು ಸೋಂಕಿತರ ಆರೋಗ್ಯ ವಿಚಾರಿಸಿದರು. ಸಣ್ಣ ರೋಗಾಣು ಇಡೀ ಮನುಕುಲವನ್ನೇ ಇಂಡಿಇಪ್ಪೇ ಮಾಡಿದ್ದು, ಜನರು ರೋಗಾಣು ಬಗ್ಗೆ ಜಾಗೃತರಾಗಿರುವಂತೆ ಮನವಿ ಮಾಡಿದ ಶಾಸಕರು, ಸೋಂಕಿತರೆಲ್ಲರೂ ಆರೋಗ್ಯವಾಗಿ ಮನಗೆ ತೆರಳುತ್ತೀರೆಂದು ಮನೋಬಲ ತುಂಬಿದರು.
ಉಪಹಾರ ವಿತರಣೆ : ಆಸ್ಪತ್ರೆಯಲ್ಲಿನ ಸೋಂಕಿತರು, ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸರು, ಎಪಿಎಂಸಿಯಲ್ಲಿನ ಕಾರ್ಮಿಕರು, ಲಸಿಕೆ ಹಾಕಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ಹಾಗೂ ಮದ್ಯಾಹ್ನದ ಊಟವನ್ನು ಶಾಸಕರು ನೀಡುತ್ತಿದ್ದು ಇಂದೂ ಕೂಡ ಉಪಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಶಾಸಕರ ಸಹೋದರ ಎಂ.ಪಿ.ರಮೇಶ್ ನೇತೃತ್ವದಲ್ಲಿ ಎಲ್ಲರಿಗೂ ಉಪಹಾರ ವಿತರಿಸಲಾಯಿತು.
ವಿವಿಧ ಗ್ರಾಮಗಳಿಗೆ ಭೇಟಿ : 45 ವರ್ಷ ಮೇಲ್ಪಟ್ಟವರಿಗೆ ನೀಡಲು 1500 ಲಸಿಕೆಗಳು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿಗೆ ಬಂದಿದ್ದು ಅವುಗಳನ್ನು ವಿವಿಧ ಗ್ರಾಮಗಳಿಗೆ ಹಂಚಿಕ್ಕೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮಲ್ಲಿಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಲಸಿಕೆ ಬಗ್ಗೆ ಮಾಹಿತಿ ಪಡೆದರು. ಕೆಲವರು ಅಪಪ್ರಚಾರ ಮಾಡಿದ ಪರಿಣಾಮ ಆರಂಭದಲ್ಲಿ ಯಾರೂ ಕೂಡ ಲಸಿಕೆ ಹಾಕಿಸಿಕೊಳ್ಳಲಿಲ್ಲಾ. ಈಗ ಲಸಿಕೆ ಹಾಕಿಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದು, ಉತ್ಪಾದನೆ ಕಡಿಮೆಯಾಗಿದ್ದು ಎಲ್ಲರಿಗೂ ಲಸಿಕೆ ಸಿಗಲಿದ್ದು ಜನರು ಸಹಕಾರ ನೀಡುವಂತೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾದ್ಯಕ್ಷ ಕೆ.ವಿ.ಶ್ರೀಧರ್,ಮುಖಂಡರಾದ ಇಂಚರ ಮಂಜು,ಲಿಂಗಾಪುರ ದೇವರಾಜ್, ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *