ಸಿ.ಎಂ. ಉದಾಸಿ ನಿಧನಕ್ಕೆ ಡಾ|| ಎಸ್ಸೆಸ್, ಎಸ್ಸೆಸ್ಸೆಂ ತೀವ್ರ ಸಂತಾಪ
ದಾವಣಗೆರೆ: ಮಾಜಿ ಸಚಿವ, ಬಿಜೆಪಿಯ ಹಿರಿಯ ಮುಖಂಡ, ಶಾಸಕ ಸಿ.ಎಂ. ಉದಾಸಿ ಅವರ ನಿಧನಕ್ಕೆ ಶಾಸಕರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಹಾಸಭಾದ ಉಪಾಧ್ಯಕ್ಷರುಗಳಾದ ಎಸ್.ಎಸ್.ಗಣೇಶ್, ಅಥಣಿ ವೀರಣ್ಣ, ಅಣಬೇರು ರಾಜಣ್ಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿ.ಎಂ. ಉದಾಸಿ ಅವರು ಉತ್ತರ ಕರ್ನಾಟಕ ಭಾಗದ ವೀರಶೈವ-ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದರು. ಅತ್ಯಂತ ಸರಳ, ಸಜ್ಜನ ರಾಜಕಾರಣಿ, ಲೋಕೋಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರೈತ ಕುಟುಂಬದಿಂದ ಬಂದ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದರು. ಇಳಿ ವಯಸ್ಸಿನಲ್ಲೂ ಶಾಸಕರಾಗಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅತ್ಯಂತ ಸೌಮ್ಯ ಸ್ವಭಾವದ ಸಿ.ಎಂ. ಉದಾಸಿ ಅವರು 7 ಭಾಷೆಗಳನ್ನು ಸುಲಿತವಾಗಿ ಮಾತನಾಡುತ್ತಿದ್ದುದು ಅವರ ಪಾಡಿಂತ್ಯಕ್ಕೆ ಸಾಕ್ಷಿ ಎಂದು ತಮ್ಮ ಸಂತಾಪ ಸೂಚಕದಲ್ಲಿ ಅವರುಗಳು ಸ್ಮರಿಸಿದ್ದಾರೆ.
ಸಿ.ಎಂ. ಉದಾಸಿ ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರನ್ನೂ ಒಳಗೊಂಡಂತೆ ಮೃತರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಸಿ.ಎಂ. ಉದಾಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರುಗಳು ಪ್ರಾರ್ಥಿಸಿದ್ದಾರೆ.