ಶಿವಮೊಗ್ಗ,
ಭದ್ರಾವತಿ ತಾಲ್ಲೂಕಿನ ಕಾಗೆ ಕೊಡಮಗ್ಗಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂದು ಕೈಗೊಳ್ಳಲಾಗಿರುವ ನಾಲೆ ಸ್ವಚ್ಚತೆ ಕಾಮಗಾರಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಕಾರ್ಮಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಮಾತನಾಡಿ, ಕಾರ್ಮಿಕರು ಕೋವಿಡ್ 19 ನಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸ್‍ನಂತಹ ಕೋವಿಡ್ ನಿಯಮಗಳನ್ನು ಪಾಲಿಸುವ ಕುರಿತು ಜಾಗೃತಿ ಮೂಡಿಸಿದರು. ಹಾಗೂ ಗ್ರಾಮೀಣ ಭಾಗದಲ್ಲಿ ಎರಡನೇ ಅಲೆಯಿಂದ ಹೆಚ್ಚಿನ ಸಾವು ನೋವು ಸಂಭವಿಸುತ್ತಿದ್ದು ಗ್ರಾಮಸ್ಥರು, ರೈತರು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದರು.
ನರೇಗಾ ಯೋಜನೆ ಕೇಂದ್ರ ಸರ್ಕಾರದ ಒಂದು ಯಶಸ್ವೀ ಯೋಜನೆಯಾಗಿದ್ದು, ಸಾರ್ವಜನಿಕರು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಈ ಯೋಜನೆಯ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿ ಆರ್ಥಿಕವಾಗಿ ಸಬಲರಾಗಬೇಕು. ಪ್ರಸ್ತುತ ಜಲಾಶಯದಿಂದ ನಾಲೆಗಳಿಗೆ ನೀರು ನಿಲ್ಲಿಸಿದ್ದು, ಈ ಸಂದರ್ಭದಲ್ಲಿ ನಾಲೆ ಸ್ವಚ್ಚಗೊಳಿಸುವ, ದುರಸ್ತಿಪಡಿಸುವ ಕೆಲಸವನ್ನು ಈ ಯೋಜನೆಯಡಿ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿ ರವಿ, ಆನಂದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್, ಕಿರಿಯ ಅಭಿಯಂತರ ಪುನೀತ್ ಮತ್ತು ಕಿರಣ್ ಉಪಸ್ಥಿತರಿದ್ದರು.