ಆದ್ಯತೆ- ಸಿ.ಬಿ. ರಿಷ್ಯಂತ್
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇನ್ನೂ
ಜಾರಿಯಲ್ಲಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಕಟ್ಟುನಿಟ್ಟಿನ
ಲಾಕ್‍ಡೌನ್ ಜಾರಿಗೊಳಿಸಲು ಪ್ರಥಮಾದ್ಯತೆ ನೀಡಲಾಗುವುದು, ನಿಷೇಧಿತ
ಅವಧಿಯಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ
ಜರುಗಿಸಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.
ರಿಷ್ಯಂತ್ ಹೇಳಿದರು.
ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ
ಬಳಿಕ, ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ
ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್
ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗದ ಕಾರಣಕ್ಕಾಗಿ ಲಾಕ್‍ಡೌನ್ ಅನ್ನು
ಮುಂದುವರೆಸಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ
ಕೋವಿಡ್ ಹರಡುವಿಕೆ ಪ್ರಮಾಣ ನಿಯಂತ್ರಿಸಲು ಲಾಕ್‍ಡೌನ್ ಅನ್ನು
ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆದ್ಯತೆ ನೀಡಲಾಗುವುದು.
ನಗರದಲ್ಲಿ ಎಲ್ಲೆಲ್ಲಿ ಯಾವ ಯಾವ ಸಮಸ್ಯೆಗಳಿವೆ ಎಂಬುದರ ಬಗ್ಗೆ
ಮಾಹಿತಿ ಮತ್ತು ದಾಖಲೆಗಳನ್ನು ಪಡೆದುಕೊಂಡು ನಂತರ ಅದಕ್ಕೆ
ತಕ್ಕ ಕ್ರಮಗಳನ್ನು ಜರುಗಿಸುವಂತಹ ಕÉಲಸ
ಮಾಡಲಾಗುವುದು. ದಾವಣಗೆರೆ ನಗರದಲ್ಲಿ ಅನುಮತಿಸಲಾದ
ಸಮಯವನ್ನು ಮೀರಿ, ಸಾರ್ವಜನಿಕರು, ವ್ಯಾಪಾರಿಗಳು ಲಾಕ್‍ಡೌನ್
ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು
ಕೇಳಿಬಂದಿದ್ದು, ಕಠಿಣ ಕ್ರಮ ಜರುಗಿಸುವಂತೆ ಈಗಾಗಲೆ ಸಂಬಂಧಪಟ್ಟ
ಎಲ್ಲ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಗ್ರಾಮೀಣ
ಪ್ರದೇಶಗಳಲ್ಲಿ ಸೋಂಕು ಹೆಚ್ಚಿರುವ ಕಾರಣಕ್ಕಾಗಿ ಗ್ರಾಮ
ಗ್ರಾಮಗಳಿಗೆ ತೆರಳಿ, ಲಾಕ್‍ಡೌನ್ ಅನುಷ್ಠಾನ ಪರಿಶೀಲಿಸಲಾಗುವುದು.
ಕಂದಾಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ
ಪಡೆದು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲಾಗುವುದು.
ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಒಂದು ತಂಡದ ರೀತಿ ಕಾರ್ಯ
ನಿರ್ವಹಿಸಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ, ಅಪರಾಧ ಹಾಗೂ ಅಕ್ರಮ
ಚಟುವಟಿಕೆಗಳಿಗೆ ಕಡಿವಾಣ ಹಾಕಲು ಶ್ರಮಿಸಲಾಗುವುದು.
ಸಾರ್ವಜನಿಕರು ಯಾವುದೇ ದೂರುಗಳಿಗೆ 112 ಸಹಾಯವಾಣಿಗೆ ಕರೆ
ಮಾಡಿ, ನೆರವು ಪಡೆಯಬಹುದಾಗಿದೆ. ಪೊಲೀಸ್ ಠಾಣೆಗಳಲ್ಲಿ
ಅಧಿಕಾರಿಗಳು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಸಮರ್ಪಕವಾಗಿ
ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ. ಸಾಮಾನ್ಯ ಜನರ ದೂರಿಗೆ
ಸ್ಪಂದಿಸದ ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ವಿರುದ್ಧ
ಶಿಸ್ತು ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ. ಅಕ್ರಮ ಮರಳು
ದಂಧೆ, ಅಕ್ರಮ ಮದ್ಯ ಮಾರಾಟ ಮುಂತಾದ ಅಕ್ರಮ
ಚಟುವಟಿಕೆಗಳಲ್ಲಿ ಒಂದು ವೇಳೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ
ಭಾಗಿಯಾಗಿದ್ದಲ್ಲಿ, ಅಂತಹವರ ವಿರುದ್ಧ ಕಠಿಣ ಕ್ರಮ
ಜರುಗಿಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಗೊಂಡು
ಲಾಕ್‍ಡೌನ್ ಸಡಿಲಗೊಂಡ ಬಳಿಕ, ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ
ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಮೊದಲ
ಆದ್ಯತೆ ನೀಡಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ಕಳ್ಳತನ
ಪ್ರಕರಣಗಳನ್ನು ಪತ್ತೆಹಚ್ಚುವ ಪ್ರಮಾಣ ಹೆಚ್ಚಿಸಲು ಪೊಲೀಸ್
ಅಧಿಕಾರಿಗಳ ವಿಶೇಷ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.