ಬೆಂಗಳೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಇಳಿಕೆಯಾಗದ ಹಿನ್ನೆಲೆಯಲ್ಲಿ ಈ 11 ಜಿಲ್ಲೆಗಳಲ್ಲಿ ಜೂನ್ 14 ರಿಂದ ಜೂನ್ 21 ರವರೆಗೆ ಲಾಕ್ ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಸಚಿವರು, ಡಿಸಿಎಂ, ಜಿಲ್ಲಾಧಿಕಾರಿ, ಅಧಿಕಾರಿಗಳೊಂದಿಗೆ ಮಹತ್ವದ ಲಾಕ್ ಡೌನ್ ಸಭೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ಈ ನಿರ್ಧಾರ ಪ್ರಕಟಿಸಿದ್ದು, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಕೊಡಗು, ಮಂಡ್ಯ, ಚಿಕ್ಕಮಗಳೂರು, ಹಾಸನ, ಬೆಳಗಾವಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗದ ಹಿನ್ನೆಲೆಯಲ್ಲಿ ಜೂನ್ 14 ರಿಂದ ಜೂನ್ 21 ರವರೆಗೆ ಒಂದು ವಾರ ಲಾಕ್ ಡೌನ್ ಮುಂದುವರೆಸುವುದಾಗಿ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಜಿಲ್ಲೆಗಳಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ, ಈಗಿರುವ ಮಾರ್ಗಸೂಚಿಯೇ ಮುಂದುವರೆಯಲಿದೆ, ಉಳಿದ ಜಿಲ್ಲೆಗಳಲ್ಲಿ ಕೆಲವು ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಘೋಷಿಸಿದ್ದಾರೆ.
ರಾಜ್ಯದ ಈ 11 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೊರೊನಾ ಸೋಂಕು ಇಳಿಕೆ ಕಂಡು ಬರಲಿಲ್ಲ. ಹೀಗಾಗಿ ಆ 11 ಜಿಲ್ಲೆಗಳಲ್ಲಿ ಒಂದು ವಾರ ಲಾಕ್ ಡೌನ್ ಮುಂದುವರೆಸಲು ಸೂಚಿಸಿದ್ದಾರೆ. ಆ ಜಿಲ್ಲೆಗಳಲ್ಲಿ ಜನರು ಕೋವಿಡ್ ನಿಯಮ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಿ ಎಂದು ಯಡಿಯೂರಪ್ಪ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಹೆಚ್ಚಾಗಿರುವಂತ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಜೂನ್ 21ರವರೆಗೆ ಮುಂದುವರೆಯಲಿದೆ. ಇತರೆ ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿಗೊಳಿಸಲಾಗುತ್ತಿದೆ. ಆದ್ರೇ ಕರ್ಪ್ಯೂ ಮುಂದುವರೆಯಲಿದೆ. ಕಾರ್ಖಾನೆಗಳನ್ನು ತೆರೆಯೋದಕ್ಕೆ ಅವಕಾಶ ನೀಡಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ದಿನಾಂಕ 21-06-2021ರವರೆಗೆ ಎಲ್ಲಾ ಕಾರ್ಖಾನೆಗಳನ್ನು ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕೆಲಸಕ್ಕೆ ಅವಕಾಶ. ಗಾರ್ಮೆಂಟ್ಸ್ ಗಳಲ್ಲಿ ಶೇ.30ರಷ್ಟು ನೌಕರರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಎಲ್ಲಾ ನಿರ್ಮಾಣ ಚಟುವಟಿಕೆ ಪ್ರಾರಂಭಿಸಲು ಆವಕಾಶ. ಪಾರ್ಕ್ ಬೆಳಿಗ್ಗೆ 5 ರಿಂದ 10ರವರೆಗೆ ತೆರೆಯಲು ಅವಕಾಶ. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ 2ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆಟೋ ಟ್ಯಾಕ್ಸಿ ಸಂಚಾರಕ್ಕೆ ಇಬ್ಬರು ತೆರಳೋದಕ್ಕೆ ಅವಕಾಶ ನೀಡಲಾಗಿದೆ ಎಂದರು.
ಕೋವಿಡ್ ಕರ್ಪ್ಯೂ ರಾತ್ರಿ 7 ರಿಂದ ಬೆಳಿಗ್ಗೆ 5 ಜಾರಿಯಲ್ಲಿರಲಿದೆ. ವಾರಾಂತ್ಯ ಕರ್ಪ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಅನ್ ಲಾಕ್ ಜಾರಿಗೊಳಿಸಿದರೂ, ಬಿಎಂಟಿಸಿ, ಸಾರಿಗೆ ಬಸ್ ಸಂಚಾರ ಆರಂಭಿಸೋದಿಲ್ಲ. ಕೆಲವು ಸರ್ಕಾರಿ ಕಚೇರಿಗಳಿಗೆ ಶೇ.50ರಷ್ಟು ನೌಕರರೊಂದಿಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಅಂತರ ಜಿಲ್ಲಾ ಓಡಾಟಕ್ಕೂ ಅವಕಾಶ ನೀಡಲಾಗಿದೆ ಎಂದರು.