ಕೋವಿಡ್ ನಿಯಮ ಮೀರಿ, ಕೋವಿಡ್ ಕೇರ್ ಸೆಂಟರ್ನಲ್ಲಿ ಹೋಮ ನಡೆಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಯಾವುದೇ ಹೋಮ ಹವನದಂತಹ ಧಾರ್ಮಿಕ ಚಟುವಟಿಕೆ ನಡೆಸುವುದು ಕಾನೂನು ಬಾಹಿರ. ಈ ನಿಯಮ ಮೀರಿ ಹೋಮ ನಡೆಸಿದ ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ ಸೂಚನೆ ನೀಡಿದ್ದಾರೆ
ಕೋವಿಡ್ ಸೋಂಕು ನಿವಾರಣೆಗಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ಧನ್ವಂತರಿ ಹೋಮ ನಡೆಸಿದ್ದರು.
ಶಾಸಕರ ಈ ನಡೆ ಕಾನೂನು ಬಾಹಿರ ಕ್ರಮವಾಗಿದೆ ಎಂದು ಅವರ ವಿರುದ್ಧ ತಹಶೀಲ್ದಾರ್ ಬಸನಗೌಡ ಕೋಟೂರು ಪ್ರಕರಣ ದಾಖಲಿಸಲು ಮುಂದಾಗಿದ್ದರು.
ಈ ಘಟನೆ ಕಾನೂನು ಬಾಹಿರವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಈಗ ದಾವಣಗೆರೆ ಜಿಲ್ಲಾಧಿಕಾರಿ ತಹಶೀಲ್ದಾರಿಗೆ ಸೂಚನೆ ನೀಡಿದ್ದಾರೆ.