ಬಾದಾಮಿ‌ ವಿಧಾನಸಭೆ ಕ್ಷೇತ್ರಕ್ಕೆ 180 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ದಿ ಯೋಜನೆ ಮಂಜೂರಾಗಿದೆ.

ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮನವಿ ಮೇರೆಗೆ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯೋಜನೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಶೀಘ್ರವೇ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.‌

367 -ಬಾಣಾಪುರ- ಗದ್ದನಕೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯ ಪಟ್ಟದಕಲ್ಲು 104 ಕಿ.ಮೀ ದಿಂದ ಗುಳೇದಗುಡ್ಡ ಮಾರ್ಗವಾಗಿ ಶಿರೂರ ಕ್ರಾಸ್ 133 ಕಿ.ಮೀ ವರೆಗೂ 10 ಮೀಟರ್ ರಸ್ತೆ ವಿಸ್ತರಣೆ, ಅಗಲೀಕರಣ ಹಾಗೂ ದುರಸ್ತಿ ಕಾಮಗಾರಿ ಈ ಯೋಜನೆಯಲ್ಲಿ ಸೇರಿದೆ ಎಂದು ಸಿದ್ದರಾಮಯ್ಯ ಅವರ ಆಪ್ತ ಹೊಳಬಸು ಶೆಟ್ಟರ್ ತಿಳಿಸಿದ್ದಾರೆ.

ಈ ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಸ್ತೆ ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಯೋಜನೆಗೆ ಮಂಜೂರಾತಿ ನೀಡುವಂತೆ ಗಡ್ಕರಿ ಅವರಿಗೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು.

ಇದಕ್ಜೆ ಸ್ಪಂದಿಸಿದ ಗಡ್ಕರಿಯವರಿಗೆ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಗಳಾದ ಶ್ರೀ ಗೋವಿಂದ ಕಾರಜೋಳ ರವರಿಗೆ ಮತ್ತು ಸಿದ್ದರಾಮಯ್ಯ ಅವರಿಗೆ ಬದಾಮಿ ಕ್ಷೇತ್ರದ ಪರವಾಗಿ ಧನ್ಯವಾದ ತಿಳಿಸುವುದಾಗಿ ಶೆಟ್ಟರ್ ಹೇಳಿದ್ದಾರೆ.

ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಗೆ ಇದು ಹೊಸ ಸೇರ್ಪಡೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *