ಶಿವಮೊಗ್ಗ, ಜೂನ್ 13 ರಾಜ್ಯದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಹಾಜರಾತಿ ನಿರ್ವಹಣೆಗೆ ಜಿಯೋಫೆನ್ಸಿಂಗ್‍ನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕರ್ತವ್ಯದ ಅವಧಿಯ ನಡುವೆಯ ಕಚೇರಿಯಿಂದ ನಿರ್ಗಮಿಸುವ ವೈದ್ಯಕೀಯ ಸಿಬ್ಬಂಧಿಗಳ ಹಾಜರಾತಿಯನ್ನು ಗಮನಿಸಬಹುದಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ.ಸುಧಾಕರ್ ಅವರು ಹೇಳಿದರು.
ಅವರು ಇಂದು ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ, ಕೊರೋನ ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವೈದ್ಯಾಧಿಕಾರಿಗಳು ಹಾಗೂ ಅಲ್ಲಿನ ಸಿಬ್ಬಂಧಿಗಳೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದರು.
ಸ್ವಯಂ ಪ್ರೇರಿತವಾಗಿ ಕಾರ್ಯಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಕರ್ತವ್ಯಕ್ಕೆ ನಿಯೋಜಿತರಾಗಿರುವ ವೈದ್ಯರು ಒತ್ತಾಯಪೂರ್ವಕವಾಗಿ ಕಾರ್ಯನಿರ್ವಹಿಸುವುದು ಸಾದುವಲ್ಲ. ಪ್ರಸ್ತುತ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುಮಾರು 2ರಿಂದ 3ಲಕ್ಷ ರೂ.ಗಳ ವೇತನ ನೀಡಲಾಗುತ್ತಿದೆ. ವೈದ್ಯರ ಹುದ್ದೆ ಸಮಾಜದಲ್ಲಿ ಮಾನ್ಯತೆ ಪಡೆದ ಗೌರವಯುತ ಹುದ್ದೆಯಾಗಿದ್ದು, ಆ ಗೌರವನ್ನು ಉಳಿಸುವುದು ವೈದ್ಯರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಚಿಕಿತ್ಸೆಗೆ ದಾಖಲಾದ ಮೊದಲ ಎರಡು ದಿನದಲ್ಲಿ ಸಾವಿಗೀಡಾದವರ ಸಂಖ್ಯೆ ಶೇ.24ರಷ್ಟಿರುವುದು ಆತಂಕಕಾರಿಯಾಗಿದೆ. ಈ ಕುರಿತು ಬೆಂಗಳೂರಿನ ಪರಿಣಿತರ ತಂಡವನ್ನು ಕಳಿಸಿ, ವಾಸ್ತವ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುವ ಪ್ರತಿ ಸೋಂಕಿತರನ್ನು ಅವರ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಗಮನಿಸಿ ದಾಖಲಿಸಬೇಕು. ಅಂತೆಯೇ ನಿಯಮಾನುಸಾರ ಸಂಬಂಧಿತ ವೈದ್ಯರ ಪರಿಶೀಲನಾ ವರದಿ ನಂತರವೇ ಅವರನ್ನು ಡಿಸ್ಚಾರ್ಜ್ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಐ.ಸಿ.ಯು ಘಟಕ ಸೇರಿದಂತೆ ಆಸ್ಪತ್ರೆಯ ಎಲ್ಲಾ ವಾರ್ಡುಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಸೋಂಕಿನಿಂದ ಬಳಲುತ್ತಿರುವವ ಜೀವರಕ್ಷಣೆಗೆ ಹಾಗೂ ಸಾವಿನ ಸಂಖ್ಯೆ ನಿಯಂತ್ರಿಸುವಲ್ಲಿ ವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದವರು ನುಡಿದರು.
ರಾಜ್ಯದ ಪ್ರತಿ ಜಿಲ್ಲೆಯ ಆಸ್ಪತ್ರೆಗಳಲ್ಲಿ 100ಸಂಖ್ಯೆಯ ಮಕ್ಕಳ ಐ.ಸಿ.ಯು ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂಧಿಗಳ ಕೊರತೆ ಉಂಟಾದಲ್ಲಿ ಸಿಬ್ಬಂಧಿಗಳ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತಾಧಿಕಾರಿ ಡಾ|| ಸಿದ್ಧಪ್ಪ, ಮೆಗ್ಗಾನ್ ಅಧೀಕ್ಷಕ ಡಾ|| ಶ್ರೀಧರ್, ಎಸ್.ದತ್ತಾತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಸೇರಿದಂತೆ ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಯ ಹಿರಿಯ ವೈದ್ಯರು, ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *