ಶಿವಮೊಗ್ಗ, ಜೂನ್ 14 ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಎದುರಾಗಿರುವ ಸಮಸ್ಯೆಗಳಿಗೆ ಕಂಡುಕೊಳ್ಳಲಾದ ತುರ್ತು ಪರಿಹಾರ ಕಾರ್ಯಗಳ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಸಮೀಪದ ಹಸೂಡಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಅವರು, ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು. ಕೊರೋನ ಮುಕ್ತ ಗ್ರಾಮ ಪಂಚಾಯಿತಿಯಾಗಿ ಮಾಡುವ ನಿಟ್ಟಿನಲ್ಲಿ ಸೋಂಕಿತರನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಹಾಗೂ ಸೋಂಕಿತರು ಎದೆಗುಂದದಂತೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿಬ್ಬಂಧಿಗಳು, ಟಾಸ್ಕ್‍ಫೋರ್ಸ್, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕಾರ್ಯ ಪ್ರಶಂಸನೀಯ ಎಂದರು.
ಸೋಂಕಿತರು ಎದೆಗುಂದುವ ಅಗತ್ಯವಿಲ್ಲ. ವೈದ್ಯರ ಸಲಹೆಯಂತೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿಯೇ ಕೆಲಕಾಲ ಇದ್ದು, ಚಿಕಿತ್ಸೆ ಪಡೆದು ಗುಣಮುಖವಾಗಿ ಮರಳುವಂತೆ ಮನವಿ ಮಾಡಿದ ಅವರು, ಸೋಂಕಿತರು ಮನೆಯಲ್ಲಿದ್ದು, ಚಿಕಿತ್ಸೆ ಪಡೆಯಲು ಅವಕಾಶವಿಲ್ಲ. ಅಂತಹವರು ನಿಯಮಾನುಸಾರ ಚಿಕಿತ್ಸೆ ಪಡೆಯಲು ವೈದ್ಯರ ಶಿಫಾರಸ್ಸಿನಂತೆ ಕೋವಿಡ್ ಕೇರ್ ಸೆಂಟರ್‍ಗಳಿಗೆ ತೆರಳಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಅಂತಹವರನ್ನು ಪೊಲೀಸ್ ಸಹಾಯ ಬಳಸಿಕೊಳ್ಳಬೇಕಾಗುವುದು ಎಂದರು.
ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ತಿಳಿಸಿದ ಅವರು, ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುವ ಜೀವರಕ್ಷಕ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವಂತೆ ಹಾಗೂ ಗುಣಮುಖವಾಗಿ ಬರುವ ವ್ಯಕ್ತಿಗಳಿಗೆ ನಿರ್ಲಕ್ಷ್ಯ ಮಾಡದೆ ಮೊದಲಿನಂತೆ ಸಾಮಾಜಿಕವಾಗಿ ಗೌರವಿಸುವಂತೆ ಸೂಚಿಸಿದ ಅವರು, ಉದ್ಯೋಗ ಚೀಟಿ ಪಡೆದಿದ್ದಲ್ಲಿ ಅವರಿಗೆ ಉದ್ಯೋಗಾವಕಾಶ ನೀಡುವಂತೆ ಪಿ.ಡಿ.ಒ.ಗೆ ಸೂಚಿಸಿದರು.
ಗ್ರಾಮದ ಸುತ್ತಮುತ್ತಲಿನ ಎಲ್ಲಾ ಕೆರೆಕಟ್ಟೆ ಕಾಲುವೆಗಳನ್ನು ತಹಶೀಲ್ದಾರರಿಂದ ಸಮೀಕ್ಷೆ ಮಾಡಿಸಿ, ಒತ್ತುವರಿಯನ್ನು ತೆರೆವುಗೊಳಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಪಿ.ಡಿ.ಒ.ಗೆ ಸೂಚಿಸಿದ ಅವರು, ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡುವಂತೆ ಸೂಚಿಸಿದರು. ಪ್ರಸ್ತುತ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ-ಕಾಲುವೆಗಳ ಅಭಿವೃದ್ದಿ ಕಾರ್ಯಕೈಗೊಳ್ಳಲಾಗುತ್ತಿದೆ. ರೈತರ ಹೊಲದಲ್ಲಿ ಬದುಗಳ ನಿರ್ಮಾಣಕ್ಕೂ ಉದ್ಯೋಗಖಾತ್ರಿಯಲ್ಲಿ ಅವಕಾಶ ನೀಡಲಾಗಿದೆ ಎಂದ ಅವರು, ಕಳೆದ ಸಾಲಿನಲ್ಲಿ ರಾಜ್ಯಕ್ಕೆ 13.ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಆದರೆ, ರಾಜ್ಯವು ಕೊರೋನ ಸಂದರ್ಭವನ್ನು ಬಳಸಿಕೊಂಡು ಸುಮಾಋಉ 15ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ಪೂರೈಸಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ 800ಕೋಟಿ ರೂ.ಗಳ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿತ್ತು ಎಂದವರು ನುಡಿದರು.
ಪ್ರಸ್ತುತ ಹಸೂಡಿ ಗ್ರಾಮ ಪಂಚಾಯಿತಿಯ ಕಟ್ಟಡ ಹಳೆಯದಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು.
ಕಾರ್ಯಕ್ರಮದ ನಂತರ ಅಲ್ಲಿನ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಾಂತಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಪಿ.ಡಿ.ಒ. ರಾಜಪ್ಪ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *