ಮಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ರಾಜಕೀಯ ಕಿತ್ತಾಟ ಮಾಡುತ್ತಿರುವ ಕಚ್ಚಾಟ ಜೋರಾಗಿದೆ. ಇದು
ಜನರಿಗೆ ಮಾಡುವ ದ್ರೋಹ. ಇದು ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಚಿವರು ರಾತ್ರಿ ಸಭೆಗಾಗಿ ಕ್ಯೂ ನಿಂತಿಲ್ಲ. ಆದರೆ ಬಿಜೆಪಿ ಸಚಿವರು, ಶಾಸಕರು ಅಧಿಕಾರದ ಕಚ್ಚಾಟಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ. ಇದ್ರಿಂದ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ ಎಂದರು. ಇನ್ನು ರಾಜಕೀಯ ಜಂಜಾಟ ಬಿಟ್ಟು ಕೋವಿಡ್ ಬಗ್ಗೆ ಯೋಚಿಸಲಿ. ಸರ್ಕಾರ ಜನರಿಗೆ ಧೈರ್ಯ ನೀಡುವ ಬಗ್ಗೆ ಆಲೋಚನೆ ಮಾಡಬೇಕಾಗಿದೆ ಎಂದರು.
ಇನ್ನು ದೇಶದ ಇತಿಹಾಸದಲ್ಲಿ ಯಾರೂ ಕಾಣದ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ದಿನೇ ದಿನೇ ಪೆಟ್ರೋಲ್, ಡೀಸೆಲಲ್ ನಂತಹ ತೈಲ ಬೆಲೆ ಏರಿಕೆ ಮಾಡಿ ಖಜಾನೆ ತುಂಬುತ್ತಿದ್ದಾರೆ. ಪೆಟ್ರೋಲ್ ಪಂಪ್ ತೆರಿಗೆ ಸಂಗ್ರಹಿಸುವ ಕೇಂದ್ರ ಆಗಿದೆ ಎಂದು
ಕಿಡಿಕಾರಿದ ಅವರು, ಪೆಟ್ರೋಲ್, ಡೀಸೆಲ್ ಗಾಗಿ ಜನರು ದಿನವೀಡಿ ದುಡಿಯುವಂತಾಗಿದೆ. ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರ ಮೇಲೆ ಬರೆ ಎಳೆಯಲಾಗಿದೆ ಎಂದ ಅವತು, ಟ್ಯಾಕ್ಸ್ ಹಾಕುವ ಮೂಲಕ ಲೂಟಿ ಮಾಡಲಾಗುತ್ತಿದೆ. ಜನರು ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ತೆರಿಗೆ ಸಂಗ್ರಹಿಸುತ್ತಿದ್ದಾರೆಯೇ ವಿನಹ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡಲಾಗುತ್ತಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೇಗೆ ಆಡಳಿತ ನಡೆಸಬಹುದು.? ಸಮಸ್ಯೆ ಆದಾಗ ಜನರಿಗೆ ಭಾರ ಹಾಕದೇ ಸರ್ಕಾರ ನೋಡಿಕೊಳ್ಳಬೇಕು. ಜನರು ದಂಗೆ ಏಳುವ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬೆಲೆ ಏರಿಕೆಯನ್ನು ಸಮರ್ಥನೆ ಮಾಡುವವರು ಯೋಚನೆ ಮಾಡಬೇಕು ಎಂದರು