ಪ್ರತಿಯೊಂದಕ್ಕೂ ತನ್ನದೇ ಆದ ಪೂರ್ವ ಹಿನ್ನೆಲೆ ಇದಕೊಂದು ಇತಿಹಾಸ ಇದ್ದೆ ಇರುತ್ತದೆ.. ಯೋಗವು ಭಾರತೀಯ ಮೂಲದ, 6000 ಕ್ಕಿಂತಲೂ ಹಳಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ.

ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಯೋಗದ ಇತಿಹಾಸ
ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಕ್ರಿಯಾಶೀಲತೆಗೆ ಯೋಗ ಸಹಕಾರಿಯಾಗಿದೆ..

ವಿಶ್ವ ಯೋಗ ದಿನದ ವಿಶೇಷತೆ
ಯೋಗದ ಮಹತ್ವ
ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

ಯೋಗ ದಿನಾಚರಣೆಯ ಇತಿಹಾಸ
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.

2015, ಜೂನ್ 21ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.

ಜೂನ್ 21ರ ವಿಶೇಷ
ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.

ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.

ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.

ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಶಿವ ದೇವರು ಯೋಗದ ಆದಿ ಗುರು ಆದ ದಿನವೂ ಕೂಡಾ ಹೌದು.

ಯೋಗ ದಿನದ ಬಗ್ಗೆ ಪ್ರಧಾನಿ ಮೋದಿ ಮಾತು
ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಪ್ರಧಾನಿ ಮೋದಿಯವರ ಕೊಡುಗೆ ಬಹಳಷ್ಟಿದೆ. ಮೊದಲ ಅಂತರಾಷ್ಟ್ರೀಯ ಯೋಗ ದಿನದಂದು ಮಾತನಾಡಿದ್ದ ಮೋದಿಯವರು “ಆಧುನಿಕ ಜೀವನಶೈಲಿಯ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದಿದೆ. ಜನರು ಒತ್ತಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ, ಮಧುಮೇಹ ಹಾಗೂ ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ ರೋಗದಿಂದ ಬಳಲುತ್ತಿದ್ದಾರೆ. ಸಂವಹನ ರೋಗಗಳನ್ನು ನಿಯಂತ್ರಿಸಲು ನಾವು ವಿಧಾನಗಳನ್ನು ಹುಡುಕಿದ್ದೇವೆ. ಆದರೆ ಸಂವಹನ ಮಾಡದ ರೋಗಗಳಿಗೆ ಹೊರೆ ವರ್ಗಾಯಿಸಿಕೊಂಡಿದೆ. ಶಾಂತಿಯಿಲ್ಲದೆ ನರಳಾಡುತ್ತಿರುವ ಇಂದಿನ ಯುವ ಜನಾಂಗ ಔಷಧಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಒತ್ತಡ ಹಾಗೂ ಬಹು ಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ ಎಂಬುದಕ್ಕೆ ಪುರಾವೆಗಳಿವೆ” ಎಂದಿದ್ದರು.

ಜಿ ಕೆ ಹೆಬ್ಬಾರ್ ಶಿಕಾರಿಪುರ.

Leave a Reply

Your email address will not be published. Required fields are marked *