ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ
ಪ್ರಮುಖ ಪಾತ್ರ ವಹಿಸುತ್ತದೆ. ನಿರಂತರವಾಗಿ ಯೋಗ
ಮಾಡುವುದರಿಂದ ಉಸಿರಾಟ ಸರಾಗವಾಗುತ್ತದೆ. ಜೊತೆಗೆ
ಯೋಗಾಭ್ಯಾಸದಿಂದ ಕೊರೊನದಂತಹ ಸಾಂಕ್ರಾಮಿಕ
ರೋಗಗಳನ್ನು ಸಹ ತೊಲಗಿಸಬಹುದಾಗಿದ್ದು
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ
ಪ್ರತಿಯೊಬ್ಬರೂ ಯೋಗಾಸನದಲ್ಲಿ ನಿರಂತರವಾಗಿ
ತೊಡಗಿಸಿಕೊಳ್ಳಬೇಕು ಎಂದು ಸಂಸದರಾದ
ಡಾ.ಜಿ.ಎಂ.ಸಿದ್ದೇಶ್ವರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ
ವರದಿಗಾರರ ಕೂಟ ಹಾಗೂ ಜಿಲ್ಲಾ ಯೋಗ ಒಕ್ಕೂಟದ
ಆಶ್ರಯದಲ್ಲಿ ನಗರದ ಜಿ.ಎಂ.ಐ.ಟಿ ಕಾಲೇಜಿನ ಆವರಣದಲ್ಲಿ ಜೂನ್
21 ರಂದು ಆಯೋಜಿಸಲಾಗಿದ್ದ 7ನೇ ಅಂತರಾಷ್ಟ್ರೀಯ
ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡಕ್ಕೆ
ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಯೋಗಾಸನದ
ಮಹತ್ವವನ್ನು ಇಡೀ ವಿಶ್ವಕ್ಕೇ ಅರ್ಥೈಸಬೇಕು ಎಂಬ
ಮುಂದಾಲೋಚನೆಯಿಂದ ಯೋಗ ದಿನಾಚರಣೆ ಬಗ್ಗೆ
ಮನವರಿಕೆ ಮಾಡಿದ ಹಿನ್ನೆಲೆ ಏಳು ವರ್ಷಗಳ ಹಿಂದೆ ಜೂನ್ 21
ಅಂತರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಣೆ
ಮಾಡಿ, ಅನೇಕ ದೇಶಗಳು ಇಂದು ಯೋಗ
ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಇದು ನಮ್ಮ ದೇಶದ
ಹಿರಿಮೆ ಎಂದು ತಿಳಿಸಿದರು.
ಈ ಹಿಂದೆ ನಮ್ಮ ದೇಶದ ಪ್ರಧಾನಿಗಳು ವಿದೇಶಕ್ಕೆ
ಹೋದರೆ ಸಾಲ ಕೇಳಲು ಬರುತ್ತಿದ್ದಾರೆ ಎಂದು ಅವರ ಬಗ್ಗೆ
ಹೆಚ್ಚಿನ ಮಹತ್ವ ಕೊಡುತ್ತಿರಲಿಲ್ಲ. ಆದರೆ ನರೇಂದ್ರ
ಮೋದಿಯವರು ಪ್ರಧಾನಿಯಾದ ಬಳಿಕ ಅವರನ್ನು ರೆಡ್
ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತಿರುವುದನ್ನು ನೋಡಿದರೆ
ನಮ್ಮ ಭಾರತದ ಕೀರ್ತಿ ವಿಶ್ವದಾದ್ಯಂತ ಹರಡಿದೆ ಎಂದು
ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.5 ಕ್ಕಿಂತ
ಹೆಚ್ಚಿರುವುದರಿಂದ ಲಾಕ್‍ಡೌನ್ ಅನ್ನು ಮುಂದೂಡಲಾಗಿದೆ. ಇನ್ನೂ
ಎರಡು ಮೂರು ದಿನಗಳಲ್ಲಿ ಸೋಂಕಿನ ಪ್ರಮಾಣ
ಕಡಿಮೆಯಾಗಲಿದ್ದು, ನಮ್ಮ ಜಿಲ್ಲೆಯನ್ನು ಅನ್‍ಲಾಕ್
ಮಾಡಲಾಗುವುದು. ಆದರೆ ಸಾರ್ವಜನಿಕರು ಕೊರೊನಾ
ಸೋಂಕು ಕಡಿಮೆಯಾಗಿದೆ ಎಂದು ಕೋವಿಡ್
ನಿಯಮಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಆಗಸ್ಟ್, ಸೆಪ್ಟೆಂಬರ್
ತಿಂಗಳಲ್ಲಿ 3 ನೇ ಅಲೆಯ ಎಚ್ಚರಿಕೆ ನೀಡಿರುವುದರಿಂದ ಜನರು
ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ
ಪಾಲಿಸಬೇಕು. ಸೋಂಕಿನ ಕುರಿತು ನಾವು
ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯಗುರು ಚನ್ನಬಸವಣ್ಣ ಮಾತನಾಡಿ, ವಿಶ್ವದಾದ್ಯಂತ
ಆಚರಿಸಲ್ಪಡುವ ಯೋಗ ದಿನಾಚರಣೆಯ ತವರೂರು
ನಮ್ಮ ಭಾರತ. ಯೋಗವನ್ನು ಒಂದು ದಿನಕ್ಕೆ
ಸೀಮಿತಗೊಳಿಸದೆ ನಿರಂತರವಾಗಿ ಅಭ್ಯಾಸ ಮಾಡುವುದರಿಂದ
ಶ್ವಾಸಕೋಶದ ಶಕ್ತಿ ವೃದ್ಧಿಯಾಗುತ್ತದೆ. ಹಾಗೂ
ಕೊರೊನಾದಂತಹ ಸೋಂಕುಗಳ ವಿರುದ್ದ ಹೋರಾಡುವ
ಸಾಮಥ್ರ್ಯ ಹೆಚ್ಚುತ್ತದೆ ಎಂದ ಅವರು, ಕೊರೊನಾ
ಸೋಂಕಿಗಿಂತ ಭಯದಿಂದ ಸಾಯುವವರ ಸಂಖ್ಯೆ ಹೆಚ್ಚಿದೆ.
ಶೇ.97 ರಷ್ಟು ಅಲೋಪತಿ, ಆಯುರ್ವೇದ ಹಾಗೂ
ಹೊಮಿಯೋಪಥಿಯಲ್ಲೂ ಗುಣವಾಗುತ್ತದೆ. ಶೇ.3 ರಷ್ಟು
ತೀವ್ರರೂಪಕ್ಕೆ ಹೋಗುತ್ತದೆ. ಯಾರಿಗಾದರೂ
ಆಮ್ಲಜನಕದ ತೊಂದರೆ ಇದ್ದವರನ್ನು ಅಂಗಾತವಾಗಿ
ಮಲಗಿಸದೇ ಒಂದು ಬದಿಯಲ್ಲಿ ಮಲಗಿಸಬೇಕು. ಪ್ರತಿ ದಿನ
ಪ್ರಾಣಾಯಾಮ ಮಾಡಬೇಕು ಹಾಗೂ ದುಶ್ಚಟದಿಂದ
ದೂರವಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ,
ಯೋಗವನ್ನು ಮನೆಯಲ್ಲಿಯೇ ಆಚರಿಸಿ. ಯೋಗ ಮಾಡುವ
ಮೂಲಕ ದೈಹಿಕ ಆರೋಗ್ಯದ ಜತೆಗೆ ಮಾನಸಿಕ
ಆರೋಗ್ಯವನ್ನು ಸಹ ಪಡೆದುಕೊಳ್ಳಬಹುದು. ಎಲ್ಲರೂ
ಯೋಗಭ್ಯಾಸ ಮಾಡೇಕೆಂದು ತಿಳಿಸಿದರು.
ಈ ವೇಳೆ 3 ವರ್ಷದ ಬಾಲಕಿ ಅನ್ಯಾ ತನ್ನ ತಾಯಿಯ
ಮಾರ್ಗದರ್ಶನದಂತೆ ಯೋಗ ಮಾಡುವ ಮೂಲಕ
ನೆರೆದಿದ್ದವರ ಗಮನ ಸೆಳೆದಳು ಹಾಗೂ ತನ್ನ ಅಕ್ಕ
ಪಕ್ಕದವರನ್ನು ನೋಡಿ ವಿವಿಧ ಭಂಗಿಗಳಲ್ಲಿ ಯೋಗಾಭ್ಯಾಸ
ಮಾಡುವುದನ್ನು ಕಂಡು ಅಲ್ಲಿದ್ದವರು ಬಾಲಕಿಯನ್ನು
ಅಭಿನಂದಿಸಿದರು.
ಕೊರೊನಾ ಸೋಂಕಿನ ಪರಿಣಾಮದಿಂದ ಸಾರ್ವಜನಿಕ
ಕಾರ್ಯಕ್ರಮಗಳಿಗೆ ಅವಕಾಶವಿರದ ಕಾರಣದಿಂದ ಬಹುತೇಕ
ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಬದಲಾಗಿ
ಮನೆಯಲ್ಲಿಯೇ ಕುಳಿತು ಯೋಗ ಮಾಡುವಂತೆ
ಸಾಮಾಜಿಕ ಜಾಲತಾಣಗಳು, ಗೂಗಲ್ ಮೀಟ್ ಹಾಗೂ ಸ್ಥಳೀಯ
ಚಾನಲ್‍ಗಳ ಮೂಲಕ ನೇರ ಪ್ರಸಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಸಿಇಓ ವಿಜಯ ಮಹಾಂತೇಶ
ದಾನಮ್ಮನವರ್ ಸೇರಿದಂತೆ ಇತರೆ ಅಧಿಕಾರಿಗಳು
ಯೋಗಾಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್,
ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಧೂಡಾ
ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್
ಮುದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದೂಢಾ
ಆಯುಕ್ತ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಬಿ.ಎನ್,ಗಿರೀಶ್,
ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಡಿಹೆಚ್‍ಒ ಡಾ.ನಾಗರಾಜ್,
ಆಯುಷ್ ಅಧಿಕಾರಿ ಡಾ.ಶಂಕರೇಗೌಡ, ಸಂಸದರ ಪತ್ನಿ ಗಾಯಿತ್ರಿ
ಸಿದ್ದೇಶ್ವರ, ವಾಸುದೇವ ರಾಯ್ಕರ್ ಪಾಲ್ಗೊಂಡಿದ್ದರು.