ಶಿವಮೊಗ್ಗ, ಜೂನ್ 21 ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಈಗಾಗಲೆ ದೇಶದ ಪ್ರತಿಯೊಬ್ಬ ಪ್ರಜೆಗೆ ಲಸಿಕೆಯನ್ನು ಹಾಕಲು ತೀರ್ಮಾನಿಸಿದ್ದು, ಅದರ ಆರಂಭಿಕ ಹಂತದಲ್ಲಿ ಸಾರ್ವಜನಿಕ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಲಸಿಕೆಯನ್ನು ಮೊದಲ ಆದ್ಯತೆಯಾಗಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ನಗರದ ಪೊಲೀಸ್ ಕವಾಯತು ಸಭಾಂಗಣದಲ್ಲಿ ಪೊಲೀಸ್ ಕುಟುಂಬದ ಸದಸ್ಯರುಗಳಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈಗಾಗಲೇ ಆರೋಗ್ಯ, ಪೊಲೀಸ್, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾS, ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂಧಿಗಳು, ಪೌರಸೇವಾ ಕಾರ್ಮಿಕರು ಸೇರಿದಂತೆ ಪ್ರಮುಖ ಇಲಾಖೆಗಳ ನೌಕರರಿಗೆ ಈಗಾಗಲೆ ಲಸಿಕೆ ವಿತರಿಸಲಾಗಿದೆ. ಪ್ರಸ್ತುತ ಅವರ ಕುಟುಂಬಗಳ ಅವಲಂಬಿತರಿಗೂ ಲಸಿಕೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜಿಲ್ಲೆಯ ಎಲ್ಲ ಪ್ರಜೆಗಳಿಗೂ ಲಸಿಕೆಯನ್ನು ಹಾಕಲಾಗುವುದು ಎಂದವರು ನುಡಿದರು.
ಇದುವರೆಗೆ 45ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ನಾಗರೀಕರಿಗೆ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುತ್ತಿತ್ತು. ಪ್ರಸ್ತುತ ಇಂದಿನಿಂದ ದೇಶದಾದ್ಯಂತ 18ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದ ಅವರು ಸರ್ಕಾರದ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ದೊರೆಯಲಿದೆ ಎಂದರು.
ಈ ಲಸಿಕೆಗಳು ಸಂಪೂರ್ಣ ಉಚಿತವಾಗಿದ್ದು, ಯಾವುದೇ ವದಂತಿಗಳಿಗೆ ಆತಂಕಪಡುವ ಅಗತ್ಯವಿಲ್ಲ. ಬಡವರು, ಮದ್ಯಮ ವರ್ಗದವರು ಮತ್ತು ಯುವಜನರು ಸೇರಿದಂತೆ ಎಲ್ಲ ವರ್ಗದವರೂ ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು. ಲಸಿಕೆ ಪಡೆದ ನಂತರವೂ ಸಹ ಕೊವಿಡ್ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸುವುದರ ಜೊತೆಗೆ ಉದಾಸೀನ ಮಾಡದೇ ಲಸಿಕೆ ಹಾಕಿಸಿಕೊಳ್ಳುವುದೊಂದೇ ಪರಿಹಾರ ಎಂದವರು ನುಡಿದರು.
ಈಗವರೆಗೆ ಜಿಲ್ಲೆಯಲ್ಲಿ ಸುಮಾರು 4.50ಲಕ್ಷ ಮಂದಿಗೆ ಮೊದಲ ಹಂತದ ಹಾಗೂ ಸುಮಾರು 70,000ಮಂದಿಗೆ ಎರಡನೇ ಹಂತದ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕಿಸಿಕೊಂಡವರ ಪೈಕಿ ಸೋಂಕಿತರ ಪ್ರಮಾಣ ತೀರಾ ಕಡಿಮೆ. ಜಿಲ್ಲೆಯಲ್ಲಿಯೂ ಸೋಂಕು ಹರಡುವ ಪ್ರಮಾಣ ಶೇ.5ಕ್ಕೆ ಬಂದಿಳಿದಿದೆ. ಅದು ಸಂಪೂರ್ಣ ನಿರ್ಮೂಲನೆಗೊಳ್ಳುವವರೆಗೆ ಎಲ್ಲರೂ ಸಮಾಧಾನಚಿತ್ತರಾಗಿ ಸಹಕರಿಸುವಂತೆ ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ|| ಶೇಖರ್ ತೆಕ್ಕಣ್ಣನವರ್ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾಪೌರರಾದ ಶ್ರೀಮತಿ ಸುನಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ|| ಶೇಖರ್ ತೆಕ್ಕಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಡಾ|| ನಾಗರಾಜನಾಯ್ಕ್ ಸೇರಿದಂತೆ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು, ಪೊಲೀಸ್ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು.
ಮಹಿಳಾ ಮಿಲ್ಟ್ರಿ ಪೊಲೀಸ್ ನೇಮಕಾತಿ ರ್ಯಾಲಿ
ಶಿವಮೊಗ್ಗ, ಜೂನ್ 21 (ಕರ್ನಾಟಕ ವಾರ್ತೆ) : ಅಸ್ಸಾಂ ರೆಜಿಮೆಂಟ್ ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಜೂನ್ 06ರಿಂದ ಜುಲೈ 20ರೊಳಗಾಗಿ ರೆಜಿಮೆಂಟ್ನ ಜಾಲತಾಣ : ತಿತಿತಿ.ರಿoiಟಿiಟಿಜiಚಿಚಿಡಿmಥಿ.ಟಿiಛಿ.iಟಿನ್ನು ಸಂಪರ್ಕಿಸಿ, ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-220925ನ್ನು ಸಂಪರ್ಕಿಸಬಹುದಾಗಿದೆ.