ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗೆ ಅನುಮತಿ ನೀಡುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಇಂದು ಜಿಲ್ಲಾಧಿಕಾರಿಗಳೀಗೆ ಸೂಚನೆ ನೀಡಿದರು.
ಇಂದು ಬೆಳಿಗ್ಗೆ ದಾವಣಗೆರೆಯ ಜವಳಿ, ಬೆಳ್ಳಿ-ಬಂಗಾರ ವರ್ತಕರು ಸೇರಿದಂತೆ ಹಲವು ವಾಣಿಜ್ಯ ವಹಿವಾಟುಗಳ ವರ್ತಕರ ನಿಯೋಗವೊಂದು ಶಿವಶಂಕರಪ್ಪನವರ ನಿವಾಸಕ್ಕೆ ಆಗಮಿಸಿ ಮನವಿ ಸಲ್ಲಿಸಿತು.
ಈ ಮನವಿ ತಕ್ಷಣ ಸ್ಪಂದಿಸಿದ ಡಾ|| ಶಾಮನೂರು ಶಿವಶಂಕರಪ್ಪನವರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಸಂಪರ್ಕಿಸಿ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗೆ ಅನುಮತಿ ನೀಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಇಂದು ಅಥವಾ ನಾಳೆಯಿಂದಲೇ ಲಾಕ್ ಡೌನ್ ತೆರವಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳು ಭರವಸೆ ನೀಡಿ ಸ್ವಲ್ಪ ಸಮಯದಲ್ಲೇ ಸರ್ಕಾರದಿಂದ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳಿಗೆ ಅನ್ವಯವಾಗುವಂತೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಎಲ್ಲಾ ರೀತಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ ನೀಡಿರುವುದಾಗಿ ಆದೇಶ ಬಂದಿತು.
ಈ ಸಂದರ್ಭದಲ್ಲಿ ವರ್ತಕರುಗಳಾದ ಬಿ.ಸಿ.ಉಮಾಪತಿ, ಜಾವೀದ್ ಸಾಬ್, ವಿಜಯ್ ಎಸ್.ಜೈನ್, ಜೆ.ಹೆಚ್. ರಮೇಶ್, ಸುರೇಶ್ ಕುಮಾರ್, ಮಹೇಂದ್ರ, ಕಾಂತಿಲಾಲ್, ವಸಂತಕುಮಾರ್, ಕವಿತಾ ಚಂದ್ರಶೇಖರ್ ಮತ್ತಿತರರಿದ್ದರು.