ರಾಜ್ಯ ಸರ್ಕಾರವು ಈ ಹಿಂದಿನ ಬಜೆಟ್‍ನಲ್ಲಿ ಘೋಷಿಸಿದಂತೆ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ಮಹಿಳಾ ನೌಕರರು ತಾವು ಹೊಂದಿರುವ ಕಿರಿಯ ಮಗುವು 18ವರ್ಷ ವಯೋಮಿತಿಯವರೆಗೆ ಮಕ್ಕಳ ಹಾಲುಣಿಸುವುದು, ಪೋಷಿಸುವುದು, ಮಗುವಿನ ಅನಾರೋಗ್ಯ ಸೇರಿದಂತೆ ಒಟ್ಟಾರೆ ಮಗುವಿನ ಆರೈಕೆಗಾಗಿ ನೌಕರಳು ತಮ್ಮ ಸೇವಾ ಅವಧಿಯಲ್ಲಿ ಗರಿಷ್ಟ 06ತಿಂಗಳವರೆಗೆ(180ದಿನಗಳು) ಶಿಶುಪಾಲನಾ ರಜೆ ಪಡೆಯಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಶಿಶುಪಾಲನಾ ರಜೆಯನ್ನು ಘೋಷಿಸಿದೆ. ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15ದಿನಗಳಿಗೆ ಕಡಿಮೆ ಇಲ್ಲದಂತೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಈ ಯೋಜನೆಯಡಿ ಮಹಿಳಾ ಸರ್ಕಾರಿ ನೌಕರಳು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ, ನಿಯಮಾನುಸಾರ ಪಡೆಯಲು ಅರ್ಹವಿರುವ ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದಾಗಿದೆ. ಅಲ್ಲದೇ ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಶಿಶುಪಾಲನಾ ರಜೆಯ ಮಂಜೂರಾತಿಗಾಗಿ ಯಾವುದೇ ಪೂರಕ ದಾಖಲೆಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.


ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರಿ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ, ಪಾಲನೆ-ಪೋಷಣೆಗಾಗಿ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿತ್ತು. ಈ ಯೋಜನೆಯ ಅನುಷ್ಠಾನದಿಂದಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸರ್ಕಾರಿ ಮಹಿಳಾ ನೌಕರರು ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಆದೇಶ ಹೊರಡಿಸಲು ಸಹಕರಿಸಿದ ಮಾನ್ಯಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ಮಹಿಳಾ ನೌಕರರ ಪರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

  • ಮಹಿಳಾ ನೌಕರರಿಗೆ ಅತ್ಯಂತ ಉಪಯುಕ್ತ ಯೋಜನೆ ಇದಾಗಿದೆ. ಮಾತೃವಾತ್ಸಲ್ಯದಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಈ ಯೋಜನೆ ಸಹಕಾರಿಯಾಗಿದೆ. _ ಶ್ರೀಮತಿ ಜಿ.ಸುಮತಿ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಕೊಮ್ಮನಾಳು.

Leave a Reply

Your email address will not be published. Required fields are marked *