ತುಂಗಾ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಸಹಜವಾಗಿ ರೈತರಲ್ಲಿ ಮಂದಹಾಸ ಮೂಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಗಾಜನೂರಿನ ತುಂಗಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮಳೆಯಿಂದಾಗಿ ರೈತರು ತಮ್ಮ ಹೊಲಗಳಲ್ಲಿನ ಕೃಷಿ ಚಟುವಟಿಕೆಗಳನ್ನು ಸಕಾಲಿಕವಾಗಿ ಕೈಗೊಳ್ಳಲು ಸಹಕಾರಿಯಾಗಿದೆ. ಈ ಜಲಾಶಯ ಈಗಾಗಲೇ 2ಬಾರಿ ತುಂಬಿ ಹರಿದಿದ್ದು, ನಿರೀಕ್ಷೆಯಂತೆ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ ನಿಯಂತ್ರಣ ಕಾರ್ಯದಲ್ಲಿ ಸರ್ಕಾರವು ತಜ್ಞರ ಸಲಹೆಯಂತೆ ಕಾಲಕಾಲಕ್ಕೆ ಅಗತ್ಯ ಕ್ರಮ ಕೈಗೊಂಡಿರುವುದು ವಿಶೇಷವೆನಿಸಿದೆ. ಕೊರೋನ ನಿಯಂತ್ರಣದಲ್ಲಿ ವಿಶ್ವದಲ್ಲಿಯೇ ದೇಶ ಮೊದಲ ಹಾಗೂ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದ ಸಮೀಪದಲ್ಲಿರುವುದು ಹರ್ಷವೆನಿಸಿದೆ ಎಂದ ಅವರು, ಕೊರೋನ ಸೋಂಕು ಮುಕ್ತವಾಗಿ ರಾಜ್ಯದ ಜನ ಆರೋಗ್ಯವಾಗಿರಲಿ ಹಾಗೂ ರೈತರ ಕೃಷಿ ಚಟುವಟಿಕೆಗಳು ನಿರಾಂತಕವಾಗಿ ನಡೆದು ಸುಬೀಕ್ಷೆ ನೆಲೆಸಲಿ ಎಂದು ಪ್ರಾರ್ಥಿಸಿ, ನಾಡಿನ ಸಮಸ್ತ ಜನತೆಯ ಪರವಾಗಿ ತುಂಗೆಗೆ ಬಾಗಿನ ಸಲ್ಲಿಸಲಾಗಿದೆ ಎಂದರು.
ಕೊರೋನ ಸೋಂಕಿನ ಮತ್ತೊಂದು ಅಲೆ ಬರುವುದೆಂಬ ಬಗ್ಗೆ ಶಂಕೆಯಿದ್ದು, ಇದರಿಂದ ಮಕ್ಕಳನ್ನು ಸಂರಕ್ಷಿಸಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ. ಈಗಾಗಲೆ ಮಕ್ಕಳ ಚಿಕಿತ್ಸೆಗೆ ಪೂರಕವಾಗಿ ಹಾಸಿಗೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಅಲ್ಲದೆ 115ಜನ ವೈದ್ಯರು, ನರ್ಸ್‍ಗಳು, ‘ಡಿ’ಗ್ರೂಪ್ ನೌಕರರು ಸಿದ್ಧವಾಗಿರುವಂತೆ ಸೂಚಿಸಿದೆ ಅಂತೆಯೆ ಅಗತ್ಯವಾಗಿರುವ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ ಅವರು ಮಾತನಾಡಿ, ಶಿವಮೊಗ್ಗ ನಗರದ ಜನರಿಗೆ ಕುಡಿಯುವ ನೀರಿನ ಮೂಲವಾಗಿರುವ ತುಂಗೆ ನಗರದ ಜನರಿಗೆ ಯಾವುದೇ ಹಾನಿ ಮಾಡದಂತೆ, ಅಗತ್ಯಕ್ಕೆ ನೀರುಣಿಸಿ, ದಾಹ ತಣಿಸುವಂತೆ ಪ್ರಾರ್ಥಿಸಿ ಬಾಗಿನ ಅರ್ಪಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರ ಕುಟುಂಬ ವರ್ಗದವರು, ಮಹಾನಗರಪಾಲಿಕೆಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.