ಕೋವಿಡ್-19 ಸಂಕಟಗಳ ಸರಮಾಲೆ ಧರಿಸಿಕೊಂಡ ಜನ ಜೀವನವನ್ನು ನೋಡಿದ ಮೇಲೆ ನಾವೊಮ್ಮೆ ಅವಲೋಕಿಸಿಕೊಳ್ಳಬೇಕಿದೆ, ಸಾವು-ನೋವುಗಳ ಸ್ವಾದಿಸಿ ಸುಮ್ಮನೆ ಮೌನವಹಿಸಿ ಸೂರ ಜಗುಲಿಗಳಲ್ಲಿ ಕೂತು ಬಿಸಿಗಂಬನಿಗಳನ್ನಿಡುವ ಕುಟುಂಬಗಳ ರೋಧನೆಯ ಸದ್ದು ಆಲಿಸಿ ಬದಲಾಗದಿದ್ದರೆ ಅದೊಂದು ಮನುಷ್ಯಜೀವಿತ ಪ್ರಮಾದ ಎನ್ನಬಹುದು. ಹೀಗಾಗಿ ಮಾನವೀಯತೆಗಳ ತಳಹದಿಯಲ್ಲಿ ಅನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕಾದ ಅತೀವ ಜರೂರತ್ತಿನ ಧಾವಂತವಿದೆ ಇಂತಹದೊಂದು ಟಿಪ್ಪಣಿಯ ಮೂಲಕ ಮತ್ತೊಬ್ಬರನ್ನು ಇಲ್ಲಿ ಸಮಾಜಮುಖಿಯಾಗಿ ಪರಿಚಯಿಸಲೊರಟಿದ್ದೇನೆ.
*ಅಸಲಿಗೆ ಇಂತಿವರು ಮೂಲತಃ ಶಿವಮೊಗ್ಗದವರು ಓದಿದ್ದು ಪ್ರೌಡ ಶಿಕ್ಷಣವಾದರೂ ಹೋರಾಟದಲ್ಲಿ ಪದವಿ ಮುಗಿಸಿದ್ದಾರೆ ಎನ್ನುವಷ್ಟು ಸಂಘಟಿತ ಮನೋಭಾವ ಈ ಹುಡುಗನಲ್ಲಿ ನಾನು ನೋಡಿದ್ದೇನೆ.*
ಬರೆಯುವ ಮನಸುಗಳು ಸಮಾಜಮುಖಿಯಾಗಿದ್ದರೆ ಅದರ ಭಾವದ ಬುಗ್ಗೆಗಳು ಇಲ್ಲಿ ಲಗ್ಗೆಯಿಡುತ್ತವೆ ಎನ್ನುವುದಕ್ಕೆ ಹರ್ಷಾಭೋವಿ ಎಂಬುವ ಹೋರಾಟದ ಕಿಡಿ ಕಾರಣವಾಗುತ್ತಾರೆ, ಸೋಲುಗಳ ಸರಮಾಲೆಗಳು, ತಾತ್ಸಾರತೆಯ ಬಿಗುಮಾನಗಳು, ಅಪಮಾನಿತಕ್ಕೊಳಗಾಗುವ ಘಟಿತ ಸನ್ನಿವೇಶಗಳು, ಕೀಳಿರಿಮೆಯಲ್ಲಿ ಕಂಡು ದೂರ ತಳ್ಳಿರುವ ಅನೇಕತೆಗಳಿಗೆ ಕೆ.ಹರ್ಷಾಬೋವಿ ಕಟ್ಟಿಕೊಂಡ ಗಟ್ಟಿ ಬದುಕು ಇದೀಗ ಇತಿ ಹಾಡಿದೆ ಅಲ್ಲದೆ ನೂರು ಅಡೆತಡೆಗಳ ಮೀರಿ ಅಬ್ಬಲಗೆರೆ ಮತ್ತೋಡು ಕ್ಷೇತ್ರದ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಗೆದ್ದು ಬೀಗಿ ಅಪಮಾನಿಸುವವರ ನಡುವೆ ಚಪ್ಪಾಳೆ ಗಿಟ್ಟಿಸಿಕೊಂಡು ಅಚ್ಚರಿ ಎನ್ನುವಂತೆ ತನ್ನ ಬದುಕನ್ನು ಬದಲಾಯಿಸಿಕೊಂಡಿದ್ದಾರೆ.
ಮೊದಲಿಗೆ ಹರ್ಷಾಭೋವಿ ಮಲೆನಾಡು ಕನ್ನಡ ಪಡೆಯ ಕಟ್ಟಾಳುವಾಗಿ ಕಾರ್ಯದರ್ಶಿ ಸ್ಥಾನವನ್ನು ತುಂಬುತ್ತಾರೆ, ಇಲ್ಲಿದ್ದು ರಾಜ್ಯದಲ್ಲಿಯೇ ಯಾರು ಮಾಡಲಾರದ ಹೋರಾಟವೊಂದಕ್ಕೆ ಮುನ್ನುಡಿಯಾಗಿ ಇಡೀ ವ್ಯವಸ್ಥೆಯನ್ನು ಜಾಗರೂಕತೆಗೊಳಿಸಿ ನಿಲ್ಲುತ್ತಾರೆ.
ಪೊಲೀಸ್ ವಲಯ ಕೂಡ ಬೆಚ್ಚಿ ಬೀಳುತ್ತದೆ “ಮಲೆನಾಡು ಕನ್ನಡ ಪಡೆ” ತೆರೆದಿಟ್ಟ ಅಸಲಿಯತ್ತಿನ ಅನಾಹುತಕಾರಿ ಅಡ್ಡೆಗಳ ಮೇಲೆ ಪೊಲೀಸ್ ದಾಳಿ ನಡೆಯುತ್ತದೆ. ದುರ್ಗಿಗುಡಿ, ಜೈಲ್ ರಸ್ತೆ, ಗಾರ್ಡನ್ ಏರಿಯಾ, ಬಾಪೂಜಿ ನಗರ, ರವೀಂದ್ರನಗರ ಹೀಗೆ ಹಲವಡೆ ಆಯಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೇಸು ದಾಖಲಾಗಿ ದಶಕಗಳ ಸಾಲಿನ ನಂತರವೂ ನಡೆಯುತ್ತಿರುವ ಜೀವಂತ ಉದಾಹರಣೆಗಳಿವೆ.
ಇಡೀ ರಾಜ್ಯವೇ ಬೆಚ್ಚಿ ಬಿದ್ದ ಕೇಸು ದಾಖಲಾಗಿದ್ದು ಮೊದಲು ಇದೇ ಶಿವಮೊಗ್ಗದಲ್ಲಿ ಅದು ಮಲೆನಾಡು ಕನ್ನಡ ಪಡೆಯ ಸಂಘಟಿತ ಹೋರಾಟದಲ್ಲಿ ಎನ್ನುವುದು ವಿಶೇಷ..! ಅಸಲಿಗೆ ಏರ್ ಟೆಲ್, ವೋಡಾಪೋನ್, ಡೋಕೋಮೋ, ರಿಲಯನ್ಸ್ ಇನ್ನು ಮುಂತಾದ ಕಂಪನಿಗಳ ಸಿಮ್ ಕಾರ್ಡ್ ಗಳನ್ನು ನಕಲಿ ಆಕ್ಟಿವೇಶನ್ ಮಾಡುವ ಜಾಲ ಇದಾಗಿತ್ತು, ಅಂದರೆ ಒಂದು ಸಿಮ್ ಖರೀದಿಸಿದ ಓರ್ವ ಗ್ರಾಹಕನ ದಾಖಲೆಯನ್ನು ಬಳಸಿಕೊಂಡು ಅದೇ ಹೆಸರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಸಿದ್ದಪಡಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಈ ಜಾಲದ ಚಟುವಟಿಕೆಗಳಿಂದ ಮಾಫಿಯಾ, ಸಮಾಜವಿದ್ರೋಹಿ, ಇನ್ನೀತರ ದುಂಡಾವರ್ತನೆಗಳಿಗೆ ಬಳಸಿಕೊಳ್ಳಲಾಗುತಿತ್ತು ಎನ್ನುವ ಖಚಿತ ಮಾಹಿತಿ ಮೇರೆಗೆ ಒಂದು ತಿಂಗಳ ಕಾಲ ಮಲೆನಾಡು ಕನ್ನಡ ಪಡೆ ನೇತೃತ್ವದಲ್ಲಿ ಹೋರಾಟದ ಮಾಹಿತಿಯಂತೆ ಪೊಲೀಸರು ಮೇಜರ್ ಸರ್ಜರಿ ಮಾಡಿದ್ದರು. ಇಂತಹ ಬಹುಮುಖ್ಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಮಲ್ಲಿಕಾರ್ಜನ್ ಮರಡಿ, ನವೀನ್, ಕೃಷ್ಣ, ಇನ್ನೀತರರ ಸಂಘಟಕರೊಂದಿಗೆ ಜತೆಯಾಗಿ ನಿಂತವರೇ ಕೆ.ಹರ್ಷಾಭೋವಿ.
ಈ ದಾಳಿಗಳ ನಂತರ ಇಡೀ ರಾಜ್ಯದಲ್ಲಿ ಹಲವು ಕಡೆ ಪೊಲೀಸರು ಮುಗಿಬಿದ್ದು ಇಂತಹ ಜಾಲವನ್ನು ಬಯಲಿಗೆಳೆದಿದ್ದು ಎಂದಿಗೂ ಮಲೆನಾಡು ಮರೆಯುವಂತಿಲ್ಲ, ಇದೇ ಕನ್ನಡ ಸಂಘಟನೆಯಲ್ಲಿ ಮುಂದುವರೆದಂತೆ “ಕಡ್ಡಾಯ ನಾಮಫಲಕ” ಪರಭಾಷಾ ಚಿತ್ರಗಳ ಪೋಸ್ಟರ್ ಕನ್ನಡದಲ್ಲಿಯೇ ಕನ್ನಡನಾಡಿಗೆ ಬರಬೇಕೆನ್ನುವ ಧರಣಿ – ಹೋರಾಟದಲ್ಲಿ ಚಲನ ಚಿತ್ರ ನಿರ್ದೇಶಕ ಟಿ.ಎಸ್ ನಾಗಾಭರಣವರು ದನಿಯಾಗಿದ್ದು ಕನ್ನಡಪರ ನಿಲುವುಗಳಿಗೆ ಧೈತ್ಯ ಬಲ ತುಂಬಿತ್ತು.
ಹೀಗೆ ಪಲ್ಲಕ್ಕಿ ರಾಧಕರಷ್ಣರವರಂತಹ ಸಾಂಗತ್ಯ ಅವರ ಮೂಲಕ ಒಂದಿಷ್ಟು ಆಟೋ ಚಾಲಕರ ಮಕ್ಕಳಿಗೆ ಶಾಲಾ ವೆಚ್ಚಗಳನ್ನು ಭರಿಸುವ ಸೇವಾಭೂಮಿಕೆಯಲ್ಲಿ “ಮಕಪ”ದ ಮೂಲಕ ಕನ್ನಡದ ಕಟ್ಟಾಳುವಾಗಿ ಗುರುತಿಸಿಕೊಂಡ ಕೆ.ಹರ್ಷಾಭೋವಿ ಮುತ್ತಪ್ಪ ರೈ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಜಯಕರ್ನಾಟಕ ಸಂಘಟನೆಗೆ ಸೇರ್ಪಡೆಯಾಗುತ್ತಾರೆ, ಇಲ್ಲಿ “ಪಡಿತರ ಅಕ್ಕಿ” ಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಜಾಲವನ್ನು ಬೇದಿಸಿ ಸಂಭಂದಿಸಿದ ಇಲಾಖೆಗಳನ್ನು ಎಚ್ಚರಿಸುತ್ತಾರೆ.
ಲೋಡ್ ಗಟ್ಟಲೇ ಪಡಿತರ ಅಕ್ಕಿ ಗೋಡೋನ್ ನಿಂದ ಕಾಳಸಂತೆಕೋರರ ಅಡ್ಡೆಗಳಿಗೆ ಸ್ಥಳಾಂತರಿಸುವ ಗುಪ್ತದಂಧೆಯನ್ನು ಪತ್ತೆ ಹಚ್ಚಿ ಆರ್.ಎಂ.ಸಿ ಯಾರ್ಡ್, ಇನ್ನೀತರ ಕಡೆಗಳಲ್ಲಿ ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ಖಚಿತ ಮಾಹಿತಿ ನೀಡಿ ದಾಳಿ ನಡೆಸಿ ಸಾವಿರಾರು ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಬಡವರಿಗೆ ಉಳಿಸಿದ ಮಹತ್ತರವಾದ ಹೋರಾಟಗಳಲ್ಲಿ ಕೆ.ಹರ್ಷಾಭೋವಿ ಮಲೆನಾಡಿನ ಗಮನ ಸೆಳೆಯುತ್ತಾರೆ, ಅಂದು ನನಗೊತ್ತಿರುವಂತೆ ಹರ್ಷಾಭೋವಿಯವರು ನೀಡುವ ಮಾಹಿತಿ, ಹೋರಾಟಕ್ಕಾಗಿ ಕಾಯುತ್ತಿದ್ದ ಒಂದಿಷ್ಟು ಮಾಧ್ಯಮದವರು ಸುದ್ದಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸುತ್ತಾರೆ ಇಂತಹ ಅವಿಸ್ಮರಣೀಯ ಹೋರಾಟ ಶ್ಲಾಘನೀಯವಾದುದ್ದು.
ನಂತರ ಜಯಕರ್ನಾಟಕ ಸಂಘಟನೆಯ ಮೂಲಕ ಪಡಿತರ ಚೀಟಿದಾರರಿಗೆ ನೀಡಲಾಗುತ್ತಿದ್ದ ಸೀಮೆಎಣ್ಣೆಯನ್ನು ಬ್ಯಾರಲ್ ಸಹಿತ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಜಾಲವನ್ನು ಕೂಡ ಬಿಡದೆ ಪೊಲೀಸರಿಗೆ ಹಿಡಿದುಕೊಟ್ಟ ಹರ್ಷಾಭೋವಿಯವರ ಹೋರಾಟದ ಕಿಚ್ಚನ್ನು ಪ್ರಶಂಸಿಲೇಬೇಕಾಗುತ್ತದೆ.
ಹೀಗೆ ತನ್ನ ಹೋರಾಟದ ಬದುಕನ್ನು ಬರೆದುಕೊಂಡು “ಕನ್ನಡಿಗರ ಜನಪರ ವೇದಿಕೆ”ಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಕನ್ನಡದ ಹಾಗೂ ಜನಪರ ದನಿಯಾಗಿ ಮಾದರಿಯಾಗುತ್ತಾರೆ. ನಂತರ “ಬಸವನ ಗುಡಿ ಕನ್ನಡಿಗರ ವೇದಿಕೆ”ಯ ಮೂಲಕವು ವಿನೂತನ ರಾಜ್ಯೋತ್ಸವವನ್ನು ಆಚರಿಸುವ ಸಲುವಾಗಿ ತಂಡವನ್ನು ಕಟ್ಟಿಕೊಂಡು ನಿಲ್ಲುವ ಹರ್ಷಭೋವಿ ಕನ್ನಡ ಸಿನಿಮಾದ ಅಸೀಮ ತಾರೆಗಳಾದ ಲೀಲಾವತಿ ಹಾಗೂ ವಿನೋದರಾಜ್ ರವರನ್ನು ವೇದಿಕೆಗೆ ಆಹ್ವಾನಿಸಿ ಅವರಿಗೆ ಸ್ವಾಭಿಮಾನಿ ಕನ್ನಡತಿ ಹಾಗೂ ಸ್ವಾಭಿಮಾನಿ ಕನ್ನಡಿಗ ಎನ್ನುವ ಬಿರುದು ನೀಡಿ ಸನ್ಮಾನಿಸುವ ಕನ್ನಡ ಸಾಂಸ್ಕೃತಿಕ ಹಬ್ಬವನ್ನು ಆಚರಿಸುತ್ತಾರೆ. ಹಿರಿಯ ನಟಿ ಲಕ್ಷ್ಮೀದೇವಿಯವರನ್ನು ಕೂಡ ಗೌರವಿಸುವ ಕಾರ್ಯಕ್ರಮ, ರಿಯಾಲಿಟಿ ಶೋ ನ ಮೆಹೆಬೂಬ್ ಪಾಷ ರವರನ್ನು ಸೇರಿದಂತೆ ಹಲವಾರು ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿದ ಕೀರ್ತಿ ಈ ತಂಡಕ್ಕೆ ಲಭಿಸುತ್ತದೆ ಎನ್ನುವುದು ಇಂದಿಗೂ ಮೆಲುಕು ಹಾಕುವಂತೆ ಮಾಡಿದೆ.
ಹೀಗೆ ಕನ್ನಡದ ಕಟ್ಟಾಳುವಾಗಿ ಸುಧೀರ್ಘವಾಗಿ ಶ್ರಮಿಸಿ ವಿನೂತನ ಹೋರಾಟದ ಮೂಲಕ ಹೆಜ್ಜೆ ಗುರುತುಗಳನ್ನು ಶಾಶ್ವತಗೊಳಿಸಿದ ಹರ್ಷಾಭೋವಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ರಾಜಕೀಯವಾಗಿ ಬೆಳೆದು ನಿಲ್ಲಬೇಕು ಈ ಮೂಲಕ ಜನಸಮುದಾಯಕ್ಕೆ ಆಸರೆಯಾಗಬೇಕು ಎನ್ನುವ ಇರಾದೆಯಲ್ಲಿ ಕಾರ್ಪೋರೇಟರ್ ಆಗುವ ಕನಸನ್ನು ಕಟ್ಟಿಕೊಳ್ಳುತ್ತಾರೆ ಆದರೆ ಅಲ್ಲಿ ಅವಕಾಶ ಸಿಗದೆ ಇದ್ದರೂ ತಾನು ಬೆಂಬಲಿಸಿದ ಅಭ್ಯರ್ಥಿಯ ಗೆಲುವಿನ ಮುಂಚೂಣಿಯಲ್ಲಿರುತ್ತಾರೆ.
“ಸೋಲು ಗೆಲುವಿಗೊಂದು ಸೋಪಾನ, ಅಪಮಾನಗಳು ಎಚ್ಚರಿಸುವ ದೀವಿಗೆಗಳು” ಎನ್ನುವ ಕಟು ವಾಸ್ತವದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ಮತ್ತೋಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಗ್ರಾಪಂ ಸದಸ್ಯರಾಗಿ ಮಾದರಿ ಗ್ರಾಮ ನಿರ್ಮಾಣದಲ್ಲಿ ಮುಂದಾಗಿರುವ ಈ ಸರಿ ಹೊತ್ತಿನಲ್ಲಿ ಕೋವಿಡ್-19 ಬಾಧೆ ವಿಶ್ವದಲ್ಲಿ ಮನುಕುಲದ ನೆಮ್ಮದಿಯನ್ನು ಕಿತ್ತು ಭಕ್ಷಿಸುತ್ತಿರುವ ನಡುವೆ ಜನಜೀವನ ಆತಂಕಕ್ಕೀಡಾಗಿರುವುದನ್ನು ಮನಗಂಡು ಅವರಿಗೆ ನಿರಂತರವಾಗಿ ಮನೋಧೈರ್ಯ ತುಂಬುತ್ತಿರುವ ಜನಪ್ರತಿನಿಧಿ ಹರ್ಷಾಭೋವಿ ಹಸಿವಿನಿಂದ ಕಂಗೆಟ್ಟ ಕುಟುಂಬಗಳಿಗೆ “ಪುಡ್ ಕಿಟ್” ವಿತರಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಅನ್ಯರಿಗೂ ಉದಾಹರಣೆಯಾಗಿದ್ದಾರೆ.
ಅರಿವು-ಜಾಗೃತಿಯ ಕಹಳೆಯೊಂದಿಗೆ ಮಾಸ್ಕ್ ವಿತರಣೆ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಖುದ್ದು ಸ್ಯಾನಿಟೈಸರ್ ಸಿಂಪಡಿಸಿ ಜನರ ಎದೆಮಾನಸಗಳಲ್ಲಿ ಬೆರೆತು ಹೋಗಿರುವ ನಿಜದ ನಾಯಕನಾಗಿ ದರ್ಶಿಸಿಕೊಳ್ಳುತ್ತಾರೆ ಹರ್ಷಾಭೋವಿ.
ಅಂದು ಅಪಮಾನಿತ ಘಟಿತ ಸನ್ನಿವೇಶಗಳು, ಯಾರಲ್ಲೂ ಬರವಸೆ ಮೂಡಿಸಲು ನಡೆಸಿದ ವಿಫಲಯತ್ನ, ತಾತ್ಸಾರತೆಯ ವಿಷಬೀಜ ಬಿತ್ತುವವರ ನಡುವೆ ಬೆಳೆದು ನಿಂತ ಎಲ್ಲಾ ಕಾಲದಲ್ಲಿಯೂ ಅಣ್ಣ ಟೈಲ್ಸ್ ಚಂದ್ರಶೇಖರ್ ಸದಾ ಬೆಂಗಾವಲಿಗೆ ನಿಂದು ಹಾರೈಸಿರುವ ಅವಿನಾಭಾವತೆಗಳಿವೆ, ತನ್ನ ಸಹೋದರನ ಉಜ್ವಲಭವಿಷ್ಯದ ಕನಸು ಕಾಣುತ್ತಿದ್ದ ಇಂತಿವರ ಕನಸು ಎಂದಿಗೂ ಕಮರಿ ಹೋಗಲೇ ಇಲ್ಲ ಅದು ಜನಪ್ರತಿನಿಧಿಯಾಗಿ ಅರಳಿಸುವಂತೆ ಮಾಡಿರುವುದು ಅವರಿಗೂ ಎಲ್ಲಿಲ್ಲದ ಸಂತೋಷ ತುಂಬಿಕೊಂಡಿದೆ.
ಒಟ್ಟಿನಲ್ಲಿ ಕನ್ನಡದ ಕಟ್ಟಾಳುವಾಗಿ ಸಾಕಷ್ಟು ಅನಾಹುತಕಾರಿ ಹೋರಾಟಗಳಲ್ಲಿ ನುಗ್ಗಿ ಬಡವರ ಪರವಾಗಿ ನಿಂತು ಜಿಲ್ಲಾಡಳಿತಕ್ಕೆ ಎಚ್ಚರಿಸುತ್ತಲೇ ಸಾಗಿ ಬಂದ ಹರ್ಷಾಭೋವಿ ಇಂದು ಗ್ರಾಪಂ ಸದಸ್ಯನಾಗಿ ಮಾದರಿ ಗ್ರಾಪಂ ನಿರ್ಮಾಣದ ಇಚ್ಚೆ ವ್ಯಕ್ತಪಡಿಸಿದ್ದಾರೆ. ಮನುಷ್ಯ ನಿರ್ಧರಿಸಿದರೆ ತಾನು ಯಾವ ಹಂತಕ್ಕೆ ಬೇಕಾದರೂ ತಲುಪಬಹುದು, ತನ್ನ ಮಸ್ತಿಷ್ಕ ಮಾತ್ರ ಶಾಂತತೆಯಿಂದ ಕೂಡಿರಬೇಕು, ಹಾಗೂ ನಿರಂತರವಾಗಿ ತಾಳ್ಮೆ-ಜಾಣ್ಮೆಯಿಂದ ದಾಪುಗಾಲಿಟ್ಟಿದ್ದಾದರೆ ಹರ್ಷಾಭೋವಿಯಂತೆ ಸಮಾಜಮುಖಿ ಜನಪ್ರತಿನಿಧಿಯಾಗಿ ಗುರುತರ ನಾಯಕತ್ವವನ್ನು ಪಡೆಯಬಹುದಾಗಿದೆ ಎಂದು ಈ ಸಂದರ್ಭದಲ್ಲಿ ಅಂಭೊಣಿಸುತ್ತೇನೆ.
-ಗಾರಾ.ಶ್ರೀನಿವಾಸ್