ಹೊನ್ನಾಳಿ : ಲಸಿಕೆ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲಾ, ಅವಳಿ ತಾಲೂಕಿ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರೂ ಲಸಿಕೋತ್ಸವದಲ್ಲಿ ಪಾಲ್ಗೊಂಡು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ತಾಲೂಕಿನ ಕೋಟೆಮಲ್ಲೂರು, ಕೋಣನತಲೆ, ಅರಕೆರೆ, ಮಾಸಡಿ, ಕುಂದೂರು, ಕೂಲಂಬಿ, ಕುಂಬಳೂರು,ಮುಕ್ತೇನಹಳ್ಳಿ,ಎಚ್.ಕಡದಕಟ್ಟೆ,ಮಾರಿಕೊಪ್ಪ,ಕತ್ತಿಗೆ ಗ್ರಾಮಗಳಲ್ಲಿನ ಲಸಿಕಾ ಕೇಂದ್ರಗಳು ಸೇರಿದಂತೆ ಅಂಬೇಡ್ಕರ್ ಭವನದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆಗಳ ಬಗ್ಗೆ ಮಾಹಿತಿ ಪಡೆದು, ಜನರಿಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಆರಂಭದಲ್ಲಿ ಲಸಿಕೆ ತೆಗೆದುಕೊಳ್ಳಿ ಎಂದು ಸರ್ಕಾರಗಳು ಮನವಿ ಮಾಡಿದಾಗ ಯಾರೂ ಮುಂದೆ ಬಂದು ಲಸಿಕೆ ಪಡೆಯಲಿಲ್ಲಾ, ಕೆಲವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕಿದ್ದರು, ಆಗಲೇ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದರೇ ಎಲ್ಲರಿಗೂ ಲಸಿಕೆ ಹಾಕಿ ಮುಗಿಯುತ್ತಿತ್ತು ಎಂದರು.
ಅವಳಿ ತಾಲೂಕಿನಾಧ್ಯಂತ 72,511 ಜನರಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ ಎಂದ ಶಾಸಕರು, 45 ವರ್ಷ ಮೇಲ್ಪಟ್ಟವರಿಗೆ 53,278 ಜನರಿಗೆ ಲಸಿಕೆ ಹಾಕಿದ್ದು ಶೇ 89 ರಷ್ಟು ಲಸಿಕೆ ಹಾಕಲಾಗಿದೆ ಎಂದ ಶಾಸಕರು, 18 ವರ್ಷ ಮೇಲ್ಪಟ್ಟವರಿಗೆ 1,03,500 ಟಾರ್ಗೆಟ್ ಇದ್ದು ಅದರಲ್ಲಿ ಶೇ 10 ರಷ್ಟು ಜನರಿಗೆ ಲಸಿಕೆ ಹಾಕಲಾಗಿದ್ದು ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದರು.
ಇನ್ನು ಲಸಿಕೆ ಹಾಕುವಾಗ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡಿಸಿ ಲಸಿಕೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಲಸಿಕೆ ಹಾಕಿಸಿಕೊಳ್ಳುವ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕರು ಸಾರ್ವಜನಿಕರಲ್ಲಿ ಮಾನವಿ ಮಾಡಿದರು.
ಅವಳಿ ತಾಲೂನಾಧ್ಯಂತ 3,584 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಅದರಲ್ಲಿ 3,267 ಜನರು ಕೊರೊನಾದಿಂದ ಗುಣಮುಖರಾಗಿದ್ದು, 166 ಸಕ್ರಿಯ ಪ್ರಕರಣಗಳು ಅವಳಿ ತಾಲೂಕಿನಾಧ್ಯಂತ ಇದ್ದು, ಅವರು ಕೋವಿಡ್ ಕೇರ್ ಸೆಂಟರ್ ಸೇರಿದಂತೆ ವಿವಿಧ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೊರೊನಾ ಎರಡನೇ ಅಲೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಕೊರೊನಾ ಮೂರನೇ ಅಲೆ ಬರುತ್ತದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದು ಈಗಾಗಲೇ ತಾಲೂಕು ಆಡಳಿತ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದು, ಅವಳಿ ತಾಲೂಕಿನಲ್ಲಿ ಎರಡು ಸಾವಿರ ಹಾಸಿಗೆಗಳನ್ನು ಅದಕ್ಕಾಗಿ ಮೀಸಲಿಡಲಾಗಿದೆ ಅಷ್ಟೇ ಅಲ್ಲದೇ ಅಡ್ವಾನ್ಸ್ಡ್ ಅಂಬ್ಯೂಲೆನ್ಸ್ ಸೇರಿ ಮೂರು ಹೊಸ ಅಂಬ್ಯೂಲೆನ್ಸ್‍ಗಳನ್ನು ತರಿಸಲಾಗುತ್ತಿದೆ ಎಂದ ಶಾಸಕರು ಒಂದು ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿದ್ದು ನಾಳೆ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆಗೊಳ್ಳಲಿದೆ ಎಂದರು.
ತಾಲೂಕಿನ ಅರಬಗಟ್ಟೆ ಸಮೀಪವಿರುವ ಕೋವಿಡ್ ಕೇರ್ ಸೆಂಟರ್ ದೇಶಕ್ಕೆ ಮಾದರಿ ಕೋವಿಡ್ ಕೇರ್ ಸೆಂಟರ್ ಆಗಿದ್ದು, ಕೋವಿಡ್ ಕೇರ್ ಸೆಂಟರ್‍ನಲ್ಲಿರುವವರಲ್ಲಿರುವವರನ್ನು ನನ್ನ ಕುಟುಂಬಸ್ಥರ ರೀತಿ ನೋಡಿಕೊಳ್ಳುತ್ತಿದ್ದು ಕಳೆದ ಒಂದು ತಿಂಗಳಿನಿಂದ ಅಲ್ಲೇ ವಾಸ್ತವ್ಯ ಮಾಡುವ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.
ಸೋಂಕಿತರಿಗೆ ಊಟ ವ್ಯವಸ್ಥೆ : ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗಾಗೀ ಮಾದೇನಹಳ್ಳಿ ಹಾಗೂ ಬಾಗವಾಡಿ ಗ್ರಾಮಸ್ಥರು ಗೋಧಿ ಪಾಯಸ ಹಾಗೂ ರೊಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದರು. ಇದರ ಜೊತೆಗೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಮಾಡಿಸಿದ್ದು ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗೆ ಶಾಸಕರು ಊಟ ಬಡಿಸುವ ಮೂಲಕ ಊಟದ ವ್ಯವಸ್ಥೆ ಮಾಡಿಸಿದ ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *