ಮುಡಿಪು ಜೂ 26: ಕೋವಿಡ್‌ ಲಾಕ್‌ಡೌನ್‌ ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವ ಸ್ವ ಸಹಾಯ ಸಂಘದ ಸದಸ್ಯರು‌ ಕೊಣಾಜೆಯಲ್ಲಿ ಹಡಿಲು ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.
ಸಹಾಯ ಸಂಘ ಸದಸ್ಯರ‌ ಕೃಷಿ ನಾಟಿ ಕಾರ್ಯಕ್ಕೆ ಶಾಸಕ ಯು.ಟಿ.ಖಾದರ್ ಅವರು ಲುಂಗಿ, ಮುಟ್ಟಾಲೆ ಧರಿಸಿ, ಗದ್ದೆಗಿಳಿದು ಸಾಂಪ್ರದಾಯಿಕವಾಗಿ ಶೈಲಿಯಲ್ಲಿ ನೇಜಿ ನೆಟ್ಟು ಚಾಲನೆ ನೀಡಿದರು. ಖಾದರ್. ‘ಕೋವಿಡ್ ಸಂಕಷ್ಟ ಕಾಲದಲ್ಲಿ‌ ನಾವು ನಕಾರಾತ್ಮಕ ಚಿಂತನೆ ಮಾಡದೆ ಇಂತಹ ಮಾದರಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಹೆಚ್ಚು ಜನರು ಇಂತಹ ಕಾರ್ಯಕ್ಕೆ ಸೇರಬೇಕು’ ಎಂದರು.

ಕೊಣಾಜೆ ಕೆಳಗಿನ ಮನೆ ಬಳಿಯ ನಾಗಬ್ರಹ್ಮ ಪ್ರಗತಿಪರ ಸ್ವಹಾಯ ಸಂಘದ ಈ ಕೃಷಿ ಕಾರ್ಯಕ್ಕೆ ಪರಿಸರದ ಇತರ ಸ್ವಸಹಾಯ ಸಂಘಗಳ ಸದಸ್ಯರೂ ಕೈ ಜೋಡಿಸಿದರು. ‘ಪ್ರತಿವರ್ಷ ಮಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಬಂದು ಹಿರಿಯರೊಂದಿಗೆ ಸೇರಿ ಕೊಣಾಜೆ ಕೆಳಗಿನಮನೆ ಗದ್ದೆಯಲ್ಲಿ ಕೃಷಿ ಪಾಠ ಕಲಿಯುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಈ ಕ್ರಮ ನಡೆಯುತ್ತಿತ್ತು. ಕೋವಿಡ್ ಕಾರಣಕ್ಕೆ ಎರಡು ವರ್ಷಗಳಿಂದ ಈ ಪ್ರಕ್ರಿಯೆ ನಿಂತಿದೆ. ಈ ಬಾರಿ ಸ್ವ ಸಹಾಯ ಸಂಘದ ಸದಸ್ಯರೇ ಇಲ್ಲಿ ನಾಟಿ ಮಾಡಿದ್ದಾರೆ’ ಎಂದು ಪಂಚಾಯಿತಿ ಸದಸ್ಯ ಅಚ್ಯುತ ಗಟ್ಟಿ ಹೇಳಿದರು.

ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಸದಸ್ಯ ಇಕ್ಬಾಲ್, ರವಿಕುಮಾರ್, ವೇದಾವತಿ ಗಟ್ಟಿ, ನಝರ್ ಷಾ, ಸಂತೋಷ್ ಕುಮಾರ್ ಶೆಟ್ಟಿ, ಪಂಚಾಯಿತಿ ಸಿಬ್ಬಂದಿ ಸವಿತಾ, ಶಾಲಿನಿ, ಶ್ಯಾಲೆಟ್ ಡಿಸೋಜ, ಸ್ಥಳೀಯರಾದ ಮುತ್ತು ಶೆಟ್ಟಿ, ಇಕ್ಬಾಲ್ ಸಾಮಣಿಗೆ, ಅಮೀರ್ ಹುಸೈನ್ ಕೋಡಿಜಾಲ್, ಮಹಾಬಲ ಗಟ್ಟಿ, ಸೀತಾರಾಮ ಗಟ್ಟಿಣ ದಯಾನಂದ ಗಟ್ಟಿ, ಯಾದವ ಬೆಳ್ಚಾಡ ಇದ್ದರು.

Leave a Reply

Your email address will not be published. Required fields are marked *

You missed