-ಬಿ.ಎ. ಬಸವರಾಜ

ಕೋವಿಡ್‍ನ ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಬಿಪಿಎಲ್, ಎಪಿಎಲ್ ಎಂಬ
ತಾರತಮ್ಯವಿಲ್ಲದೆ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲ
ಕುಟುಂಬಗಳಿಗೂ ತಲಾ ಒಂದು ಲಕ್ಷ ರೂ. ಪರಿಹಾರ ಒದಗಿಸುವಂತೆ
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು
ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ
ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ಅವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಪರಿಶೀಲನಾ ಸಭೆ
ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಕೋವಿಡ್‍ನ ಮೊದಲನೆ ಅಲೆಯಲ್ಲಿ 264 ಜನ
ಹಾಗೂ ಈ ವರ್ಷದ ಮಾರ್ಚ್ ನಿಂದ ಈವರೆಗಿನ ಎರಡನೆ ಅಲೆಯಲ್ಲಿ 273 ಜನ
ಸೇರಿದಂತೆ ಒಟ್ಟು 537 ಜನ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಕೋವಿಡ್‍ನಿಂದ
ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಗಳಿಗೆ ತಲಾ ಒಂದು ಲಕ್ಷ ರೂ.
ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಕೋವಿಡ್‍ನಿಂದ ಸಂಭವಿಸಿದ ಸಾವಿಗೆ ಪರಿಹಾರ ನೀಡುವ ವಿಷಯದಲ್ಲಿ ಬಿಪಿಎಲ್, ಎಪಿಎಲ್
ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಪರಿಹಾರ ನೀಡುವಂತೆ ಈಗಾಗಲೆ
ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 537 ಜನ
ಕೋವಿಡ್‍ನಿಂದ ಮೃತಪಟ್ಟಿದ್ದು, ಪ್ರತಿ ವ್ಯಕ್ತಿಗೆ 01 ಲಕ್ಷ ರೂ. ಗಳಂತೆ
ಪರಿಹಾರ ನೀಡಿದರೆ, 5.37 ಕೋಟಿ ರೂ. ಅನುದಾನ ಜಿಲ್ಲೆಗೆ ಬೇಕಾಗುತ್ತದೆ.
ಆದಷ್ಟು ಶೀಘ್ರ ಮುಖ್ಯಮಂತ್ರಿಗಳು ಈ ಕುರಿತು ನಿರ್ಧಾರ
ಕೈಗೊಳ್ಳುವರು ಎಂದರು. ಇದಕ್ಕೂ ಮುನ್ನ ಜರುಗಿದ ಪರಿಶೀಲನಾ
ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿರುವ ಕೋವಿಡ್
ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಹೆಸರು,
ವಿಳಾಸವುಳ್ಳ ಸಂಪೂರ್ಣ ವಿವರವಾದ ಪಟ್ಟಿಯನ್ನು ಜಿಲ್ಲಾಧಿಕಾರಿಗಳು,
ತಾಲ್ಲೂಕುವಾರು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು, ಸರ್ಕಾರ ನೀಡುವ
ಪರಿಹಾರವನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳ

ಸಮಕ್ಷಮದಲ್ಲಿ ಆ ಕುಟುಂಬಗಳಿಗೆ ಗೌರವಪೂರ್ವಕವಾಗಿ
ಸಮರ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಖಾಸಗಿ ಬ್ಯಾನರ್‍ನಡಿ ಸರ್ಕಾರಿ ಲಸಿಕೆ ನೀಡುವಂತಿಲ್ಲ : ಸಂಸದ ಡಾ. ಜಿ.ಎಂ.
ಸಿದ್ದೇಶ್ವರ್ ಅವರು ಮಾತನಾಡಿ, ಕೋವಿಡ್ ಸೋಂಕಿನಿಂದ ಜನರ ಪ್ರಾಣ
ರಕ್ಷಣೆಗಾಗಿ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ
ಲಸಿಕೆ ನೀಡುತ್ತಿದೆ, ಅಲ್ಲದೆ ರಾಜ್ಯ ಮತ್ತು ಜಿಲ್ಲೆಗಳಿಗೆ ಸಮರ್ಪಕವಾಗಿ ಲಸಿಕೆ
ಹಂಚಿಕೆ ಮಾಡುತ್ತಿದೆ. ಆದರೆ ನಗರದಲ್ಲಿ ಖಾಸಗಿ ಬ್ಯಾನರ್‍ನಡಿ
ಸರ್ಕಾರದಿಂದ ಪೂರೈಕೆ ಮಾಡುವ ಉಚಿತ ಲಸಿಕೆಯನ್ನು ಖಾಸಗಿ ಶಿಬಿರದಲ್ಲಿ
ನೀಡಿ ಪ್ರಚಾರ ಗಿಟ್ಟಿಸುವ ಯತ್ನ ಮಾಡುತ್ತಿದ್ದಾರೆ, ಖಾಸಗಿಯವರು
ಬ್ಯಾನರ್‍ನಲ್ಲಿ ತಮ್ಮ ಫೋಟೋ ಹಾಕಿಕೊಂಡು, ತಮ್ಮ ಸ್ವಂತ ಹಣದಲ್ಲಿ
ಪಡೆದ ಲಸಿಕೆಯನ್ನು ಯಾವ ರೀತಿಯಾದರೂ ಹಾಕಿಕೊಳ್ಳಲಿ, ಇದಕ್ಕೆ
ನಮ್ಮ ಆಕ್ಷೇಪಣೆ ಇಲ್ಲ, ಆದರೆ ಖಾಸಗಿ ಬ್ಯಾನರ್‍ನಡಿ ಸರ್ಕಾರದಿಂದ ನೀಡುವ
ಉಚಿತ ಲಸಿಕೆಯನ್ನು ವಿತರಿಸಲು ಅವಕಾಶವಿಲ್ಲ, ಅಧಿಕಾರಿಗಳು ಈ ಬಗ್ಗೆ
ಸೂಕ್ತ ಕ್ರಮ ವಹಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ
ಉಸ್ತವಾರಿ ಸಚಿವರು, ಭಾರತ ಸರ್ಕಾರ ನೀಡುತ್ತಿರುವ ಉಚಿತ ಲಸಿಕೆಯನ್ನು
ಖಾಸಗಿ ಬ್ಯಾನರ್‍ನಡಿ ಹಾಕಲು ಅವಕಾಶ ನೀಡಿದರೆ, ಅಧಿಕಾರಿಗಳ ವಿರುದ್ಧ ಕಠಿಣ
ಕ್ರಮ ಜರುಗಿಸಲಾಗುವುದು ಎಂದು ಡಿಹೆಚ್‍ಒ ಡಾ. ನಾಗರಾಜ್ ಹಾಗೂ ಜಿಲ್ಲಾ
ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಅವರಿಗೆ ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ
ಈವರೆಗೆ ದಾವಣಗೆರೆ-235000, ಹರಿಹರ-66200, ಹೊನ್ನಾಳಿ-73600, ಜಗಳೂರು-
37800, ಚನ್ನಗಿರಿ ತಾಲ್ಲೂಕಿಗೆ 97500 ಡೋಸ್ ಸೇರಿದಂತೆ ಒಟ್ಟು 4.71 ಲಕ್ಷ
ಡೋಸ್ ಲಸಿಕೆ ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸಿ : ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.
ರಾಘವನ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸದ್ಯ ಕೋವಿಡ್‍ನ 1335 ಸಕ್ರಿಯ
ಪ್ರಕರಣಗಳಿವೆ. ಏಪ್ರಿಲ್ ತಿಂಗಳಿನಲ್ಲಿ 3485 ಸೋಂಕು ಪ್ರಕರಣಗಳು
ಪತ್ತೆಯಾಗಿದ್ದವು, ಮೇ ತಿಂಗಳಿನಲ್ಲಿ ಅತಿ ಹೆಚ್ಚು 16304 ಪ್ರಕರಣ
ವರದಿಯಾಗಿ, ಆತಂಕ ಮೂಡಿಸಿತ್ತು, ಜೂನ್ ತಿಂಗಳಿನಲ್ಲಿ 7009 ಪ್ರಕರಣ
ಪತ್ತೆಯಾಗಿದ್ದು, ಇದೀಗ ಪಾಸಿಟಿವಿ ಪ್ರಮಾಣ ಶೇ. 3.59 ಕ್ಕೆ ಇಳಿದಿದೆ.
ಕೋವಿಡ್‍ನಿಂದ ಈವರೆಗೆ ಒಟ್ಟಾರೆ 537 ಜನ ಮೃತಪಟ್ಟಿದ್ದರೆ,
ಕೋವಿಡ್‍ನಂತಹ ಲಕ್ಷಣಗಳುಳ್ಳ ಖಾಯಿಲೆಗೆ 309 ಜನ
ಮೃತಪಟ್ಟಿದ್ದಾರೆ, ಈ ವಾರ ಪಾಸಿಟಿವಿಟಿ ದರ ಶೇ. 2 ಕ್ಕೆ ಇಳಿಯುವ ನಿರೀಕ್ಷೆ ಇದೆ
ಎಂದರು. ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ಸದ್ಯ 1335
ಸಕ್ರಿಯ ಪ್ರಕರಣಗಳಿದ್ದು, ಸೋಂಕು ಸಂಪೂರ್ಣ
ಇಳಿಮುಖಗೊಂಡು, ಜಿಲ್ಲೆಯನ್ನು ಕೊರೋನಾ ಮುಕ್ತಗೊಳಿಸಲು
ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಿ,
ಸಾಕಾರಗೊಳಿಸುವಂತೆ ಮನವಿ ಮಾಡಿದರು.
ಕೋವಿಡ್ 3ನೇ ಅಲೆ ನಿರ್ವಹಣೆಗೆ ಸಿದ್ಧತೆ : ಡಿಹೆಚ್‍ಒ ಡಾ. ನಾಗರಾಜ್ ಮಾತನಾಡಿ,
ಜಿಲ್ಲೆಯಲ್ಲಿ ಮಕ್ಕಳ ತಜ್ಞರೊಂದಿಗೆ ಈಗಾಗಲೆ ಎರಡು ಬಾರಿ ಸಭೆ ನಡೆಸಿ
ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿ 19 ವರ್ಷದೊಳಗಿನ ಸುಮಾರು 7 ಲಕ್ಷ
ಮಕ್ಕಳು ಇರುವ ಅಂದಾಜು ಮಾಡಲಾಗಿದ್ದು, ತಜ್ಞರ ಅಭಿಪ್ರಾಯದಂತೆ
ಒಂದು ವೇಳೆ 3ನೇ ಅಲೆ ಎದುರಾದಲ್ಲಿ, ಸುಮಾರು 70 ಸಾವಿರ ಮಕ್ಕಳಿಗೆ
ಸೋಂಕು ತಗುಲುವ ಅಂದಾಜಿದೆ, ಇದರಲ್ಲಿ 700 ಮಕ್ಕಳು ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬರುವ ನಿರೀಕ್ಷೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ 60
ಆಕ್ಸಿಜನ್ ಬೆಡ್‍ನಂತೆ 2 ರಿಂದ 3 ಪ್ರತ್ಯೇಕ ವಾರ್ಡ್ ಮಕ್ಕಳಿಗಾಗಿಯೇ
ನಿಗದಿಪಡಿಸಲು ಯೋಜಿಸಲಾಗಿದೆ, ಅಲ್ಲದೆ ಮಕ್ಕಳ ಐಸಿಯುನ 36 ಬೆಡ್,
ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 04 ರಂತೆ ಒಟ್ಟು 24 ಬೆಡ್ ಸಿದ್ಧಪಡಿಸಲು
ಕ್ರಮ ವಹಿಸಲಾಗಿದೆ. ಜಿಲ್ಲೆಗೆ ಅಗತ್ಯವಿರುವ ಇಸಿಜಿ, ಎಕೋ,

ಯಂತ್ರೋಪಕರಣಗಳು, ಅತಿ ಅಗತ್ಯ ಕೆಲವು ಸಾಧನ
ಸಲಕರಣೆಗಳು, ಔಷಧಿಗಳನ್ನು ಪೂರೈಸಲು ಪಟ್ಟಿ ಸಿದ್ಧಪಡಿಸಿ
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ಖನಿಜ ನಿಧಿಯಡಿ
ಆರೋಗ್ಯ ಪರಿಕರ ಖರೀದಿಗಾಗಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸಲು
ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿನ 180 ತೀವ್ರ ಅಪೌಷ್ಠಿಕ
ಮಕ್ಕಳು, 8000 ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ
ಕೈಗೊಂಡಿದ್ದು, ಈ ಮಕ್ಕಳ ಪಾಲಕರಿಗೆ ಲಸಿಕೆ ನೀಡುವ ಕಾರ್ಯ
ಮಾಡಲಾಗುತ್ತಿದೆ, ಅಲ್ಲದೆ ಅವರಿಗೆ ರೋಗ ಲಕ್ಷಣಗಳು,
ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ
ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ. ವೈದ್ಯಾಧಿಕಾರಿಗಳು, ಮಕ್ಕಳ
ತಜ್ಞರು, ಶುಶ್ರೂಷಕರಿಗೆ ಸೋಂಕು ಪೀಡಿತ ಮಕ್ಕಳ ಆರೈಕೆ
ಕುರಿತಂತೆ ವಿಶೇಷ ತರಬೇತಿಯನ್ನು ಜುಲೈ ಮೊದಲ ವಾರದಲ್ಲಿ
ಆಯೋಜಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ
ಸಚಿವರು, ಸರ್ಕಾರಕ್ಕೆ ಸಲ್ಲಿಸುವ ಬೇಡಿಕೆ ಪಟ್ಟಿಯನ್ನು ತಮಗೆ
ಒದಗಿಸಿದಲ್ಲಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ತಕ್ಷಣ ಪೂರೈಕೆಗೆ ಕ್ರಮ
ಕೈಗೊಳ್ಳಲಾಗುವುದು ಎಂದರು.
07 ಮಿಸ್ಸಿ ಪ್ರಕರಣ ವರದಿ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ,
ಸಂಭವನೀಯ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ
ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, ಜಿಲ್ಲೆಗೆ ಅಗತ್ಯವಿರುವ
ವೈದ್ಯಕೀಯ ಸಲಕರಣೆ, ಉಪಕರಣ, ಔಷಧಿಗಳ ಬಗ್ಗೆ ಸರ್ಕಾರಕ್ಕೆ
ಬೇಡಿಕೆ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿ ಸದ್ಯ 35 ಬ್ಲಾಕ್ ಫಂಗಸ್ ಸಕ್ರಿಯ
ಪ್ರಕರಣಗಳಿದ್ದು, ಇವರ ಚಿಕಿತ್ಸೆಗೆ ಬೇಕಾದ ಔಷಧಿ ಜಿಲ್ಲೆಗೆ
ಪೂರೈಕೆಯಾಗುವುದರಲ್ಲಿ ವ್ಯತ್ಯಯವಾಗುತ್ತಿದ್ದು, ಇದರಿಂದ
ಸೋಂಕಿತರಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ, ಸಚಿವರು, ರಾಜ್ಯ
ಮಟ್ಟದಲ್ಲಿ ಈ ವಿಷಯದ ಬಗ್ಗೆ ಕಾಳಜಿ ವಹಿಸಿ, ಅಗತ್ಯವಿರುವ ಔಷಧಿಯನ್ನು
ಜಿಲ್ಲೆಗೆ ಪೂರೈಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ
ಕುರಿತು ಪ್ರತಿಕ್ರಿಯಿಸಿದ ತಜ್ಞ ವೈದ್ಯ ಡಾ. ಮಂಜುನಾಥ್, ಬ್ಲಾಕ್ ಫಂಗಸ್
ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಗೆ 2856 ವಯಲ್ ಔಷಧಿ ಅಗತ್ಯವಿದೆ,
ಆದರೆ ಜಿಲ್ಲೆಗೆ ಕೇವಲ 396 ವಯಲ್ ಮಾತ್ರ ಪೂರೈಕೆಯಾಗಿದೆ
ಎಂದರು. ಸಚಿವರು ಸ್ಪಂದಿಸಿ, ಜಿಲ್ಲೆಗೆ ಅಗತ್ಯವಿರುವ ಔಷಧಿಯ ಪಟ್ಟಿಯ
ಪ್ರಸ್ತಾವನೆ ಪ್ರತಿ ನೀಡುವಂತೆ ಸೂಚಿಸಿದರು, ಅಲ್ಲದೆ ಕೂಡಲೆ
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಅಗತ್ಯ ಔಷಧಿ
ಪೂರೈಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗುಣಮುಖದತ್ತ ಎನೆಕ್ ಸೋಂಕಿತ ಬಾಲಕ : ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ,
ಜಿಲ್ಲೆಯಲ್ಲಿ ಕೋವಿಡ್ ಗುಣಮುಖ ಹೊಂದಿದ ಮಕ್ಕಳಲ್ಲಿ ಮಿಸ್ಸಿ ರೋಗ
ಕಂಡುಬಂದ 07 ಪ್ರಕರಣಗಳು ವರದಿಯಾಗಿದ್ದು, ಈ ಮಕ್ಕಳಿಗೆ ಚಿಕಿತ್ಸೆ
ನೀಡಲಾಗುತ್ತಿದೆ. ಜಿಲ್ಲೆಯ ಬಾಲಕನಲ್ಲಿ ಎನೆಕ್ (ಅಕ್ಯೂಟ್
ನೈಕ್ರೋಟೈಸಿಂಗ್ ಎನ್ಸೆಫಲೋಪಥಿ) ರೋಗ ಪತ್ತೆಯಂತಹ
ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣ ಪತ್ತೆಯಾಗಿದ್ದು,
ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ
ಮಗು ಸ್ಪಂದಿಸುತ್ತಿದ್ದು, ಗುಣಮುಖನಾಗುತ್ತಿದ್ದಾನೆ ಎನ್ನುವ
ಸಮಾಧಾನಕರ ಸುದ್ದಿಯನ್ನು ವೈದ್ಯರು ನೀಡಿದ್ದಾರೆ ಎಂದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್,
ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾ ಪಂಚಾಯತ್ ಸಿಇಒ ಡಾ.
ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *