ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಸ್ಥಳ ನೀಡುವಂತೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲೇ ನಿಗಮಕ್ಕೆ ಜಾಗ ದೊರಕಲಿದೆ ಎಂಬ ಭರವಸೆ ಇದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಶಿಕಲಾ ವಿ.ಟೆಂಗಳಿ ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ಸೌಲಭ್ಯಕ್ಕೆ ಮನವಿ: ನಿಗಮದ ವತಿಯಿಂದ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ದಮನಿತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಜಾಗ ನೀಡುವಂತೆ ಮನವಿ ಮಾಡಿದ್ದೇನೆ. ಶಿವಮೊಗ್ಗದ ಜಿಲ್ಲಾಧಿಕಾರಿಗಳು ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, 5 ಎಕರೆ ಜಾಗ ನೀಡಲು ಒಪ್ಪಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುಮಾರು 300 ದಮನಿತ ಮಹಿಳೆಯರು ಮತ್ತು 600 ಅಂಗತ್ವ ಅಲ್ಪಸಂಖ್ಯಾತರಿದ್ದು, ಇವರು ಸ್ವಾವಲಂಬಿಗಳಾಗಿ ಮತ್ತು ಗೌರವಯುತವಾಗಿ ಜೀವಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಮಾಡದಂತೆ ಮನವಿ ಮಾಡುತ್ತೇನೆ ಎಂದರು.
ನಿಗಮದ ವಿವಿಧ ಯೋಜನೆಗಳಾದ ಉದ್ಯೋಗಿನಿ, ಕಿರುಸಾಲ, ಸಮೃದ್ದಿ, ಪ.ಜಾತಿ/ಪ.ಪಂ ಉಪಯೋಜನೆಗಳು, ಧನಶ್ರೀ, ಚೇತನ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳು ಒಳಗೊಂಡಂತೆ ದಮನಿತ/ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಗೆ ಅನುಕೂಲವಾಗುವಂತಹ ಇತರೆ ಯೋಜನೆಗಳನ್ನೂ ಅವರಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.
ಘಟಕ ಸ್ಥಾಪನೆಗೆ ಧನಸಹಾಯ: ರಾಯಚೂರು, ಹೊಸಪೇಟೆ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಒಟ್ಟಾಗಿ ಉತ್ಪಾದಕ ಘಟಕಗಳನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. ಹೊಸಪೇಟೆಯಲ್ಲಿ ಸ್ಥಾಪಿಸಲಾಗಿರುವ ಶೇಂಗಾ ಚಕ್ಕಿ ಘಟಕ ಅತ್ಯಂತ ಯಶಸ್ವಿಯಾಗಿದೆ. ಇದೇ ರೀತಿ ನೀವು ಯಾವುದಾದರೂ ಘಟಕ ಸ್ಥಾಪಿಸಲು ಮುಂದಾದಲ್ಲಿ ನಿಗಮ ಆರ್ಥಿಕ ಸೌಲಭ್ಯ ನೀಡಲು ಸಿದ್ದವಾಗಿದೆ. ಹಾಗೂ ಘಟಕ ಸ್ಥಾಪನೆ ಬಗ್ಗೆ ತರಬೇತಿ ಸಹ ನಿಡಲಾಗುವುದು ಎಂದರು. 15 ರಿಂದ 20 ಜನ ಸಂಘಟಿತರಾಗಿ ಧೃಡ ಮನಸ್ಸು ಮಾಡಿ ಮುಂದೆ ಬಂದರೆ ತರಬೇತಿ ಜೊತೆಗೆ ಘಟಕ ಸ್ಥಾಪಿಸಲು ಸಹಕಾರ ನೀಡಲಾಗುವುದು ಎಂದರು.
ಹಾಗೂ ಪ್ರತಿ ಜಿಲ್ಲೆಗಳಲ್ಲಿ ನಿಗಮದ ವತಿಯಿಂದ ಒಂದೊಂದು ಸ್ವ ಸಹಾಯ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಮಾಜಿ ದೇವದಾಸಿಯರು ಸಂಘಟಿತರಾಗಿ ಮುಂದೆ ಬರಬೇಕೆಂದರು.
ಆನ್ಲೈನ್ ಅರ್ಜಿ : ನಿಗಮದ ವಿವಿಧ ಯೋಜನೆಗಳಡಿ ಸಾಲ ಪಡೆದಿರುವವರು ಸಾಲವನ್ನು ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಸಕಾಲದಲ್ಲಿ ಬ್ಯಾಂಕಿಗೆ ಸಾಲ ಮರು ಪಾವತಿ ಮಾಡಬೇಕು. ಆಗ ಬ್ಯಾಂಕ್ನವರು ಕೂಡ ಉತ್ತಮವಾಗಿ ಸಹಕರಿಸುತ್ತಾರೆ. ಕಿರುಸಾಲ ಪಡೆದು ಬಹುತೇಕ ಫಲಾನುಭವಿಗಳು ಸರಿಯಾಗಿ ಸಾಲ ಮರುಪಾವತಿ ಮಾಡಿರುತ್ತಾರೆ. ತಾಲ್ಲೂಕುಗಳ ಸಿಡಿಪಿಓ ಗಳು ಹೀಗೆ ಮರುಪಾವತಿ ಮಾಡಿದ ಮೇಲೆ ಮತ್ತೆ ಸಾಲದ ಅವಶ್ಯಕತೆ ಇದ್ದರೆ ಸಹಕರಿಸಬೇಕು. ಹಾಗೂ ಅವಶ್ಯಕತೆ ಇರುವವರಿಗೆ ಸಾಲ ದೊರಕಬೇಕೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಆನ್ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ರವರ ಸಹಕಾರವೂ ಇದ್ದು, ಶಾಸಕರಿಂದ ನಿಗದಿತ ಅವಧಿಯಲ್ಲಿ ಫಲಾನುಭವಿಗಳ ಆಯ್ಕೆಯ ಅನುಮೋದನೆ ಪಡೆದುಕೊಂಡು ಆಯಾ ಸಾಲಿನಲ್ಲೇ ಸೌಲಭ್ಯ ಸಿಗುವಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಅಭಿವೃದ್ದಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಸುರೇಶ್, ಸಿ ಮಾತನಾಡಿ ಮಹಿಳಾ ಅಭಿವೃದ್ದಿ ನಿಗದಮ ವಿವಿಧ ಯೋಜನೆಗಳ ಕುರಿತು ಪ್ರಗತಿ ವರದಿ ಸಲ್ಲಿಸಿದರು. ತಾಲ್ಲೂಕುಗಳ ಸಿಡಿಪಿಓ ಗಳು ತಾಲ್ಲೂಕುಗಳ ಪ್ರಗತಿ ವರದಿ ಸಲ್ಲಿಸಿದರು.
ಲಿಂಗತ್ವ ಅಲ್ಪಸಂಖ್ಯಾತರೋರ್ವರು ಮಾತನಾಡಿ, ತಮ್ಮ ಸಮುದಾಯದಲ್ಲಿ ಕೆಲವರು ಒಟ್ಟಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ವೈಯಕ್ತಿಕವಾಗಿ ವಸತಿ ಸೌಲಭ್ಯ ಒದಗಿಸುವಂತೆ ಕಳೆದ 15 ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇವೆ. ಇದುವರೆಗೆ ಸೌಲಭ್ಯ ದೊರೆತಿಲ್ಲ. ಹಾಗೂ ನಮಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನೀಡಬೇಕು. ಟ್ರಾನ್ಸ್ಜೆಂಡರ್ಗಳಿಗೆ ಕಚೇರಿಗಳಲ್ಲಿ ಸಹಾಯಕರು ಅಥವಾ ಇತರೆ ಕೆಲಸಗಳನ್ನು ನೀಡಲು ಸರ್ಕಾರಿ ಕಚೇರಿಗಳ ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರು ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದಮನಿತ ಮಹಿಳೆಯರಿಗೆ ಸಾಲ ಸೌಲಭ್ಯ ಪ್ರಮಾಣ ಪತ್ರ ವಿತರಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ, ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಸುರೇಶ್.ಜಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಎಂ.ಡಿ ಸೇರಿದಂತೆ ವಿವಿಧ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.