ನವೆಂಬರ್ ಬಂದರೆ ರಾಜ್ ನೆನಪು
ನಟಸಾರ್ವಭೌಮ ಡಾ. ರಾಜ್ಕುಮಾರ್ ಇವರು ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.
ರಂಗಭೂಮಿ ಮತ್ತು ತಂದೆಯ ಪ್ರಭಾವ:
ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ.ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನವರು ಎಂದರೆ ೧೯೩೦-೧೯೫೦ ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು.
ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತು ರಾಜ್ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದರು. ಡಾ.ರಾಜ್ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ.
ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ “ಕೃಷ್ಣಲೀಲಾ” ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯ ನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್ ಗೆ “ಅಂಬರೀಷ” ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು.
ಅನಂತರ “ಕುರುಕ್ಷೇತ್ರ” ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್ಕುಮಾರ್ಗೆ ಇದು ರಂಗ ತಾಲೀಮು. ೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ “ಭೂ ಕೈಲಾಸ” ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿ ಯಲ್ಲಿಯೂ ರಾಜ್ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ:
1942 ರಲ್ಲಿ ಬಿಡುಗಡೆಯಾದ “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ಬಾಲನಟನಾಗಿಯೂ, 1952 ರಲ್ಲಿ ಬಿಡುಗಡೆಯಾದ ಶಂಕರ್ಸಿಂಗ್ ನಿರ್ದೇಶನದ “ಶ್ರೀ ಶ್ರೀನಿವಾಸ ಕಲ್ಯಾಣ” ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
1953ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತು ರಾಜ್ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು.
ಸಿಂಹ ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್ ರವರನ್ನು ಕಂಡ ತಕ್ಷಣ “ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು” ಎಂಬ ಭಾವನೆ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ ಕೋರಿ ಸಿಂಹ ಬೀಳ್ಕೊಟ್ಟಿದ್ದರು. ಮೇಲಿನ ಘಟನೆ ನಡೆದ ಕೆಲ ದಿನಗಳಲ್ಲಿ ಮೈಸೂರಿನ ಟೌನ್ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು.
ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್ ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷ ಪಟ್ಟರು. ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು.
ನಂತರ ಮುತ್ತುರಾಜ್, ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು ‘ಸ್ಕ್ರೀನ್ ಟೆಸ್ಟ್’ ಗೆ ಮದರಾಸಿಗೆ ಬರಲು ಆಹ್ವಾನಿಸಿದರು.ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್ಗೆ ರಾಜಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು.
ಚತ್ರವು ೧೯೫೪ರ ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು ‘ಸ್ಕ್ರೀನ್ ಟೆಸ್ಟ್’ ನೋಡಿದ ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ಅವರು ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ ” ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ ಹೆಚ್.ಎಲ್.ಎನ್.ಸಿಂಹ ಅವರು ನಿರ್ಮಾಪಕರಿಗೆ ಎ.ವಿ.ಎಂ.ಚೆಟ್ಟಿಯಾರ್, ಇವರೇ ಸರಿಯಾದ ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು.
ಚಿತ್ರರಂಗದ ಬದುಕು:
ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು.
1960 ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು.
1966ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತ ಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ ಬದುಕಿನಲ್ಲಿ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.
1968 ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿ ಯಲ್ಲಿ ‘ಪ್ರಕಾಶ್’ ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯) ಅಭಿನಯಿಸಿದರು. ಈ ಸರಣಿ ಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್ಪಾಟ್ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಹಾಗು ಆಪರೇಷನ್ ಡೈಮಂಡ್ ರಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.
ರಾಜ್ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ (ನಟಸಾರ್ವಭೌಮ) ಕೂಡ ತಯಾರಾಯಿತು.
ಈ ಚಿತ್ರವು ರಾಜ್ಕುಮಾರ್ ಅವರ ಹಿಂದಿನ ನೂರು ಚಿತ್ರಗಳ ತುಣುಕು ದೃಶ್ಯಗಳನ್ನು ಜೊತೆಗೂಡಿಸಿ ತಯಾರಿಸುವ ಯೋಜನೆಯೊಂದಿಗೆ ಪ್ರಾರಂಭವಾದರೂ, ಸ್ಥಳಾವಕಾಶದ ಕೊರತೆಯಿಂದ ಕೆಲವು ಚಿತ್ರಗಳ ತುಣುಕುಗಳನ್ನು ಕೈಬಿಡಲಾಗಿದೆ.
1971 ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಳಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.
ರಾಜ್ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು.
ರಾಜ್ಕುಮಾರ್ ಅವರ ನೂರೈವತ್ತನೇ ಚಿತ್ರ, ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ.
ಇದೇ ವರ್ಷ ಬಿಡುಗಡೆ ಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು. ೧೯೭೫ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.
೧೯೭೭ರಲ್ಲಿ ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ, ಡಾ.ರಾಜ್ ಶಹನಾಯಿ ವಾದಕರಾಗಿ ಅಭಿನಯಿಸಿದರು. ಈ ಚಿತ್ರಕ್ಕೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ನುಡಿಸಿದವರು ಭಾರತದ ಪ್ರಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ ಡಾ.ರಾಜ್ ಅಭಿನಯಿಸಿದ್ದಾರೆ.
೧೯೮೦ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆ ಕಂಡವು. ಇದೇ ಅವಧಿಯಲ್ಲಿ ಡಾ.ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು.
ಶಂಕರ್ ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ.ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ.ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ.
೧೯೮೩ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ.ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವ ತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ.ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ.
ಡಾ.ರಾಜ್ ಅವರ ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿ ಯವರು ಡಾ.ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ.ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು.
ಡಾ.ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. ಎಂ.ವಿ.ರಾಜಮ್ಮ, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ, ಕೃಷ್ಣಕುಮಾರಿ, ರಾಜಸುಲೋಚನ, ಬಿ.ಸರೋಜದೇವಿ, ಸಂಧ್ಯಾ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಕಾಂಚನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ.ವಿ.ರಾಧ, ಶೈಲಶ್ರೀ, ರಾಜಶ್ರೀ, ವಾಣಿಶ್ರೀ, ಜಿ.ವಿ.ಲತಾ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದಾ, ಜಯಚಿತ್ರಾ, ಗಾಯತ್ರಿ, ಸರಿತಾ, ಮಾಧವಿ, ಗೀತಾ, ಅಂಬಿಕಾ, ರೂಪಾದೇವಿ, ಊರ್ವಶಿ ಮುಂತಾದವರೊಂದಿಗೆ ನಟಿಸಿದ್ದಾರೆ.
ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು.
ಅಭಿಮಾನಿ ಬಂದು .ಮಾದ್ಯಮ ಮಿತ್ರ.
ಜಿ ಕೆ ಹೆಬ್ಬಾರ್ ಶಿಕಾರಿಪುರ