ದೇಗುಲಗಳು ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರಗಳು: ಗಿರಿಸಿದ್ದೇಶ್ವರ ಸ್ವಾಮೀಜಿ
ಉಜ್ಜನೀಪುರ (ಸಾಸ್ವೆಹಳ್ಳಿ): ‘ದೇಗುಲಗಳು ಮನುಷ್ಯನ ಧಾರ್ಮಿಕ ಶ್ರದ್ಧಾ, ಭಕ್ತಿಯ ಕೇಂದ್ರಗಳು ಹಾಗೂ ನೆಮ್ಮದಿಯ ತಾಣಗಳಾಗಿವೆ. ಮಾನವೀಯತೆಗಿಂತ ಮಿಗಿಲಾದ ಧರ್ಮ ಇನ್ನೊಂದು ಇಲ್ಲ. ಕರುಣೆ,ಪ್ರೀತಿ, ವಾತ್ಸಲ್ಯ ಮೈಗೂಡಿಸಿಕೊಂಡು, ಬಾಳಿದಾಗ ಜೀವನ ಸಾರ್ಥಕ’ ಎಂದು ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಗೃಹಪ್ರವೇಶ, ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣದ ನಂತರ ನಡೆದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
‘ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಉತ್ತಮ ಸಂಸ್ಕಾರ, ಸದ್ಚಾರಿತ್ರ್ಯದಿಂದ ಗಟ್ಟಿಗೊಳಿಸುವ ಅಗತ್ಯ ಇದೆ. ಪ್ರಾಣ, ಯವೌನಕಾಲ ಒಮ್ಮೆ ಕಳೆದು ಹೋದರೆ ಮತ್ತೆ ಎಂದೂ ತಿರುಗಿ ಬರುವುದಿಲ್ಲ. ನಶ್ವರವಾದ ಶರೀರ, ನಾಶವಾಗುವ ಸಂಪತ್ತು, ಮಾಸಿ ಹೋಗುವ ಸೌಂದರ್ಯ ನಂಬಿ ಕೆಂಡಬಾರದು, ಅಧಿಕಾರ ಮತ್ತು ಹಣ ಹೂವುಗಳಿದಂತೆ, ಕುಟುಂಬ ಮತ್ತು ಪರಿವಾರ ಬೇರುಗಳಿದ್ದಂತೆ. ಫಲವಿಲ್ಲದ ಮರ ಇರಬಲ್ಲದು ಆದರೆ ಬೇರುಗಳಿಲ್ಲದೆ ಮರವಿರಲು ಸಾಧ್ಯವಿಲ್ಲ’ ಎಂದರು.
ಮಾಜಿ ಶಾಸಕ ಡಿ.ಜಿ ಶಾಂತನಗೌಡ ಮಾತನಾಡಿ, ‘ಇಂದು ಯಾವ ರೈತರು ಕೃಷಿಯಿಂದ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ. ಬೆಳದ ಬೆಳೆಯಿಂದ ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲು ಆಗುತ್ತಿಲ್ಲ. ದುಬಾರಿ ರಾಸಾಯನಿಕ ಗೊಬ್ಬರ ಔಷಧಿ ಹಾಕಿ ಬೆಳದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ರೈತ ಕುಟಂಬಗಳ ನೆಮ್ಮದಿ ಹಾಳಾಗಿ ಹೋಗಿದ್ದು, ತಾಯಂದಿರು, ಉಪಕಸುಬು ಹೈನುಗಾರಿಕೆಯಿಂದ ಕುಟಂಬಗಳ ನಿರ್ವಹಣೆಯಾಗುತ್ತಿದೆ’ ಎಂದರು.
ಡಾ.ಈಶ್ವರ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈ ಗ್ರಾಮವು 1972 ರಲ್ಲಿ ಸ್ಥಳಾಂತರಗೊಂಡ ಹಳ್ಳಿ, ಇಲ್ಲಿ ಎಲ್ಲಾ ಕೋಮಿನವರು ಒಂದೇ ಬಾವಿಯ ನೀರನ್ನು ಕುಡಿದು ಬಾಳಿದ ಈ ಗ್ರಾಮ ಸರ್ವ ಜನಾಂಗ ಶಾಂತಿಯ ತೋಟವಾಗಿದೆ. ಬಣಜಾರರ ಕಾಶಿ ಎಂದೇ ಖ್ಯಾತಿಗಳಿಸಿರುವ ಸೂರಗೊಂಡನಕೊಪ್ಪ ಅದರೆ ಅದರ ಬೀಜಾಂಕುರವೇ ಉಜ್ಜನೀಪುರ ಗ್ರಾಮ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಶೇಖರಪ್ಪ ವಹಿಸಿದ್ದರು, ಜಿ.ಪಂ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಶಾಸಕರ ಸಹೋದರ ಎಂ.ಪಿ ರಮೇಶ್, ಜಿ.ಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ್, ತಾ.ಪಂ ಮಾಜಿ ಸದಸ್ಯೆ ರೇಖಾ, ಗ್ರಾ.ಪಂ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಲೋಹಿತ್ ಕುಮಾರ್, ಬಿ.ವಾಗೀಶ್, ಬಿ.ಮಹೇಶ್ವರಪ್ಪ, ವಾಸವಿ ಸುರೇಶ್ ಕುಮಾರ್, ಜಿ.ನಾಗರಾಜಪ್ಪ, ಜಿ.ಆರ್ ಬಸವರಾಜಪ್ಪ, , ಡಿ.ಠಾಕ್ರಾನಾಯ್ಕ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಇದ್ದರು.
ಸಾಸ್ವೆಹಳ್ಳಿ ಹೋಬಳಿಯ ಉಜ್ಜನೀಪುರ ಗ್ರಾಮದ ಲಕ್ಷಿö್ಮÃನರಸಿಂಹ ದೇವಸ್ಥಾನದ ಉದ್ಘಾಟನೆಯ ಧರ್ಮ ಸಭೆಯನ್ನು ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರೆವೇರಿಸಿದರು.
ಉಜ್ಜನೀಪುರ ಗ್ರಾಮದಲ್ಲಿ ನಡೆದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಕಳಸಾರೋಹಣ, ಗೃಹಪ್ರವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಗಿರಿಸಿದ್ದೇಶ್ವರ ಸ್ವಾಮೀಜಿಗೆ ಗ್ರಾಮಸ್ಥರು ಫಲಪುಷ್ಟ ಮತ್ತು ಗೌರವ ಸಮರ್ಪಣೆ ಮಾಡಿದರು.