ವಿದ್ಯಮಾನ ಹೆಣ್ಣಿನ ದೇಹ ಪ್ರಚಾರದ ಸರಕಲ್ಲ: ಪೋಷಣ್ ಅಭಿಯಾನ್ ಜಾಹೀರಾತು ಸೀರೆಗಳಿಗೆ ಅಂಗನವಾಡಿ ಅಕ್ಕಂದಿರ ತೀವ್ರ ವಿರೋಧ
ಹೆಣ್ಣಿನ ದೇಹ ಪ್ರಚಾರದ ಸರಕಲ್ಲ: ಪೋಷಣ್ ಅಭಿಯಾನ್ ಜಾಹೀರಾತು ಸೀರೆಗಳಿಗೆ ಅಂಗನವಾಡಿ ಅಕ್ಕಂದಿರ ತೀವ್ರ ವಿರೋಧ
ತುಮಕೂರು: ಸರ್ಕಾರಗಳು ಪೋಷಣ್ ಅಭಿಯಾನದ ಭಾಗವಾಗಿ ಬ್ಯಾನರ್ ರೀತಿಯ, ಈ ಜಾಹೀರಾತು ಸೀರೆ ಕೊಡುವ ಬದಲು, ಸೀರೆಯ ಹಣವನ್ನು ಅಭಿಯಾನದ ಫಲಾನುಭವಿಗಳಿಗೆ ನೀಡಬಹುದಾಗಿತ್ತು. ಕೋವಿಡ್ ಸಂಕಷ್ಟ, ಬೆಲೆ ಏರಿಕೆಯ ಸಂಕಷ್ಟದ ದಿನಗಳಲ್ಲಿ ಪ್ರಚಾರ ಮಾಡುತ್ತಾ ಬಣ್ಣದ ಮಾತಿನಲ್ಲಿ ಜನರಿಗೆ ಪೌಷ್ಠಿಕ ಆಹಾರ ತಿನ್ನಿ ಎಂದು ಹೇಳುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಜಾರಿಗೆ ತಂದಿರುವ ಪೋಷಣ್ ಅಭಿಯಾನ್ ಕಾರ್ಯಕ್ರಮದ ಪ್ರಚಾರದ ಭಾಗವಾಗಿ, ಜಾಹೀರಾತು ಮಾದರಿಯ ಸೀರೆ ಉಡಲು ಹೇಳಿರುವುದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶಗೊಂಡಿದ್ದಾರೆ.
“ಸದ್ಯಕ್ಕೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ” ಗೌರವಧನ ಹೆಚ್ಚಳ ಇಲ್ಲ”
ನೌಕರರು ಈ ಜಾಹೀರಾತು ಸೀರೆಗಳನ್ನು ಉಟ್ಟು ಕರ್ತವ್ಯನಿರ್ವಹಿಸಬೇಕೆಂದರೇ ಹೇಗೆ? ಕರ್ತವ್ಯ ನಿಮಿತ್ತ ಕಚೇರಿ ಮತ್ತು ಜನ ಸಾಮಾನ್ಯರ ನಡುವೆ ಈ ಸೀರೆ ಉಟ್ಟು ಹೋದರೆ ಜನ ನಮ್ಮನ್ನು ನೋಡಿ ನಗೆಪಾಟಲಿಗೆ ಕಾರಣವಾಗುತ್ತದೆ. ವರ್ಷಕ್ಕೆ ಕೇವಲ ಒಂದು ಜೊತೆ ಸಮವಸ್ತ್ರದ ಸೀರೆ ಕೊಟ್ಟು, ವರ್ಷಪೂರ್ತಿ ಉಡಲು ಹೇಳುವ ಸರ್ಕಾರ ಹೆಚ್ಚುವರಿ ಸಮವಸ್ತ್ರ ನೀಡುವ ಬದಲು ಜಾಹೀರಾತು ಸೀರೆ ಕೊಟ್ಟಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.
ಸರ್ಕಾರ ಹೆಣ್ಣಿನ ದೇಹವನ್ನು ಪ್ರಚಾರದ ಸರಕಾಗಿಸಲು ಹೊರಟಿರುವುದು ನೀಚತನದ ಪರಮಾವಧಿ ಎಂದು ಸರ್ಕಾರಕ್ಕೆ ಬಿಸಿಮುಟ್ಟಿಸಿರುವ ಕಾರ್ಯಕರ್ತೆಯರು, ಆಗಿದ್ದಾಗಲಿ ಈ ಸೀರೆ ಉಡುವುದಿಲ್ಲವೆಂದು ತಿಪಟೂರಿನಲ್ಲಿ ಸೀರೆಯನ್ನು ವಾಪಸ್ ನೀಡಿ ಪ್ರತಿಭಟಿಸಿದ್ದಾರೆ.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಅವರು ಮಾತನಾಡಿ ʻʻಅಂಗನವಾಡಿ ನೌಕರರು ಪೋಷಣ ಅಭಿಯಾನವನ್ನು 2019ರಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಲಾಖೆಯು ಅಭಿಯಾನಕ್ಕೆ ಸಮವಸ್ತ್ರವಾಗಿ ಈ ಸೀರೆಗಳನ್ನು ವಿತರಿಸಿದ್ದು, ಅಂಗನವಾಡಿ ನೌಕರರನ್ನು ಜಾಹೀರಾತು ಗೊಂಬೆಗಳಂತೆ ಬಳಸಿಕೊಳ್ಳಲು ಮುಂದಾಗಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಅಷ್ಟು ಕಾಳಜಿ ಇದ್ದರೆ, ಕಳೆದ ಒಂದು ವರ್ಷದಿಂದ ಬಿಡುಗಡೆಯಾಗದ ಪೋಷಣ್ ಅಭಿಯಾನ್ ಅನುದಾನವನ್ನು ಮೊದಲು ಬಿಡುಗಡೆ ಮಾಡಲಿ, ಗುಣಮಟ್ಟದ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳನ್ನು ವಿತರಿಸಲಿ. ಅದನ್ನು ಬಿಟ್ಟು ಕಾರ್ಯಕರ್ತೆಯರು ಜಾಹೀರಾತು ಸೀರೆ ಉಟ್ಟರೆ ಪೋಷಣೆ ಬರಲ್ಲʼʼ ಎಂದು ಹೇಳಿದರು.
” ಅಂಗನವಾಡಿ ನೌಕರರನ್ನು ಸೇವಾಜೇಷ್ಠತೆಗೆ ಪರಿಗಣಿಸಿ-ಉತ್ತಮ ಬದುಕು ಕಲ್ಪಿಸಿ: ಎಸ್.ವರಲಕ್ಷ್ಮಿ”
ನಿವೃತ್ತರಾಗಿರುವ ನೌಕರರಿಗೆ ನೀಡಬೇಕಾದ ಗೌರವಧನ ನೀಡದೆ ಅಲೆಸುತ್ತಿದ್ದಾರೆ. ಇಲಾಖೆಯ ಸೌಕರ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಆದರೆ ಸಮವಸ್ತ್ರ ವಿಚಾರದಲ್ಲಿ ಇಲಾಖೆ ತ್ವರಿತ ನಿರ್ಧಾರ ಕೈಗೊಳ್ಳಬೇಕು. ಚುನಾವಣೆ ಶಾಖೆಯಿಂದ ಅಂಗನವಾಡಿಯ ನೌಕರರನ್ನು ಬಿಎಲ್ಒಗಳನ್ನಾಗಿ ನೇಮಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ ಅಂಗನವಾಡಿ ನೌಕರರಿಗೆ ಹೆಚ್ಚಿನ ಕಾರ್ಯ ಒತ್ತಡ ಇರುವುದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಎಲ್ಲ ಕಾರ್ಯಕರ್ತರನ್ನು ಬಿಎಲ್ಒ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಅಂಗನವಾಡಿ ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತುಮಕೂರು ಜಿಲ್ಲಾ ಅಧ್ಯಕ್ಷೆ ಜಿ.ಕಮಲ ಮಾತನಾಡಿ ʻʻಪೋಷಣೆ ಅಭಿಯಾನದಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ಕೊಡುವ ಪೂರಕ ಪೌಷ್ಠಿಕ ಆಹಾರದ ಗುಣಮಟ್ಟ ವೃದ್ಧಿಸಿಲ್ಲ, ಅಂಗನವಾಡಿಗೆ ಬೇಕಾದ ಮೂಲಭೂತ ಸೌಕರ್ಯಕ್ಕೆ ಯಾವ ಹಣಕಾಸನ್ನು ಕೊಡುವ ಯೋಜನೆ ಇಲ್ಲ. ಬದಲಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸೀಮಂತ, ಅನ್ನಪ್ರಾಶನದಂತಹ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಕೊಡುವುದು ಮಾಡಲಾಗುತ್ತಿದೆ. ಈ ಯೋಜನೆಗೆ ಅಂಗನವಾಡಿ ನೌಕರರನ್ನು ಪ್ರಚಾರಕರನ್ನಾಗಿಸಿ ಪೋಷಣೆ ಅಭಿಯಾನದ ಬರಹವಿರುವ ಸೀರೆಗಳನ್ನು ಬ್ಯಾನರ್ ರೀತಿ ಬಳಸಬೇಕೆಂದರೆ ನಮ್ಮ ಹೆಣ್ತತನವನ್ನು ನಾವು ಪ್ರಚಾರಕ್ಕಾಗಿ ಬಳಸಬೇಕೆ? ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹೆಣ್ತತನವನ್ನು ಪ್ರಚಾರಕ್ಕೆ ಬಳಸುವ ಪ್ರಭುತ್ವದ ಯೋಚನೆಗೆ ಧಿಕ್ಕಾರʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
: “ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಲು-ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಧರಣಿ”
ಯಾವುದೇ ಸರ್ಕಾರ ಬರಲಿ, ಆಡಳಿತ ನಡೆಸುವವರಿಂದ ಸದಾ ಅಸಡ್ಡೆ, ಅವಗಣನೆಗೆ ಒಳಗಾಗುವ ಅಂಗನವಾಡಿ ಕಾರ್ಯಕರ್ತೆಯರು ಮಾಸಿಕ ಅಲ್ಪ ಮಟ್ಟದ ಗೌರವಧನ ನೀಡಲಾಗುತ್ತಿದೆ. ಅಲ್ಲದೆ, ಹೆಚ್ಚುವರಿ ಕೆಲಸ ಮಾಡುತ್ತಾ ಜೀತದಾಳುಗಳಂತೆ ಮಳೆ, ಚಳಿ, ಬಿಸಿಲೆನ್ನದೆ ದಿನಪೂರ್ತಿ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವಭಯವನ್ನೂ ಲೆಕ್ಕಿಸದೇ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಎಲ್ಲರಿಗೂ ಗೊತ್ತಿದೆ. ಇವರ ಸೇವೆಗೆ ಕೃತಜ್ಞವಾಗಿರಬೇಕಾದ ಸರ್ಕಾರವು ಪೋಷಣ್ ಅಭಿಯಾನದ ಪುಕ್ಕಟೆ ಪ್ರಚಾರದ ಭಾಗವಾಗಿ, ಬ್ಯಾನರ್ ರೀತಿಯ ಜಾಹೀರಾತು ಸೀರೆ ಉಡಲು ಹೇಳಿ ಲಿಂಗ ಅಸೂಕ್ಷ್ಮತೆ ಪ್ರದರ್ಶಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಯಾಗುತ್ತಿದೆ.