ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆಯ
ಪಂಚತಂತ್ರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ
ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದ
ಆಡಳಿತ ವೈದ್ಯಾಧಿಕಾರಿ ಡಾ. ರತ್ನ ಸಲಹೆ ನೀಡಿದರು.
ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಸರ್ಕಾರಿ ಪ್ರಕೃತಿ
ಚಿಕಿತ್ಸಾಲಯದಲ್ಲಿ ಗುರುವಾರ ಏರ್ಪಡಿಸಲಾದ ರಾಷ್ಟ್ರೀಯ ಪ್ರಕೃತಿ
ಚಿಕಿತ್ಸಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಲ್ಕನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದ ಧ್ಯೇಯವಾಕ್ಯ
ರೋಗಮುಕ್ತ ಭಾರತ. ಪ್ರಕೃತಿ ಚಿಕಿತ್ಸೆಯ
ಪಂಚತಂತ್ರಗಳನ್ನು ಪ್ರತಿಯೊಬ್ಬರೂ ಕೂಡ ತಮ್ಮ
ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಂಚತಂತ್ರಗಳು
ಯಾವುವೆಂದರೆ, ದಿನಕ್ಕೆ ಕನಿಷ್ಟ ಮೂರು ಲೀಟರಿನಷ್ಟು ನೀರನ್ನು
ಕುಡಿಯುವುದು, ದಿನಕ್ಕೆ ಎರಡು ಹೊತ್ತಿನ ಆಹಾರ ಸೇವನೆ, ದಿನಕ್ಕೆ
ಒಂದು ಗಂಟೆಯ ಯೋಗಾಭ್ಯಾಸ, ದಿನಕ್ಕೆ ಎರಡು ಬಾರಿ ಪ್ರಾರ್ಥನೆ
ಮತ್ತು ವಾರಕ್ಕೆ ಒಂದು ದಿನದ ಉಪವಾಸ ಪ್ರಕ್ರಿಯೆಯನ್ನು
ಮಾಡುವುದು. ಹೀಗೆ ಎಲ್ಲ ರೀತಿಯ ರೋಗಗಳನ್ನು ತಡೆಯಲು
ಹಾಗೂ ಆರೋಗ್ಯಕರವಾದ ಜೀವನವನ್ನು ನಡೆಸಲು ಉಪಯುಕ್ತ
ಇದಾಗಿದೆ ಎಂದು ತಿಳಿಸಿದರು. ಇದರ ಜೊತೆಯಲ್ಲಿ ನಾವು ಸೇವಿಸುವ
ಆಹಾರವು ಹಿತಬುಕ್, ಮಿತಬುಕ್ ಮತ್ತು ಋತುಬುಕ್ ಅಂದರೆ ಹಿತವಾದ
ಆಹಾರ, ಮಿತವಾದ ಆಹಾರ ಹಾಗೂ ಋತುವಿಗೆ ತಕ್ಕನಾದ ಆಹಾರವನ್ನು
ಸೇವಿಸುವುದರಿಂದ ನಮ್ಮ ದೇಹವನ್ನು ಸ್ವಸ್ಥವಾಗಿರಿಸಿಕೊಳ್ಳಲು
ಸಾಧ್ಯವೆಂದು ಡಾ. ರತ್ನ ತಿಳಿಸಿದರು.
ಆಸ್ಪತ್ರೆಯ ತಜ್ಞವೈದ್ಯ ಡಾ. ಗಂಗಾಧರ ವರ್ಮ ಬಿ.ಆರ್
ಮಾತನಾಡಿ ರೋಗರಹಿತವಾದ ಜೀವನವನ್ನು ನಡೆಸಲು, ಬಂದಂತಹ
ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಲು ಪ್ರಕೃತಿ
ಚಿಕಿತ್ಸೆಯು ಅತ್ಯಮೂಲ್ಯವಾದ ಸಾಧನ. ಪ್ರಕೃತಿ ಚಿಕಿತ್ಸೆ ಎಂದರೆ
ಕೇವಲ ರೋಗಗಳನ್ನು ಸರಿ ಮಾಡುವುದು ಮಾತ್ರವಲ್ಲದೆ
ನಮ್ಮ ಜೀವನಶೈಲಿಯ ಬದಲಾವಣೆಯನ್ನು ಮಾಡಿ ತನ್ಮೂಲಕ
ರೋಗಗಳು ಬರದಂತೆ ತಡೆಯುವುದರೊಂದಿಗೆ,
ಆರೋಗ್ಯಯುತವಾದ ಜೀವನವನ್ನು ನಡೆಸಲು
ಪೂರಕವಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ರಾಜೇಶ್ವರಿ,
ಲಕ್ಞ್ಮೀದೇವಿ, ರಾಮು, ಈಶ್ವರ, ಪವಿತ್ರ, ವಿಜಯಮ್ಮ ಹಾಗೂ
ಆಸ್ಪತ್ರೆಯ ಎಲ್ಲ ಸಾಧಕರು ಉಪಸ್ಥಿತರಿದ್ದರು.