ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅರ್ಹ ಎಲ್ಲರಿಗೂ
ಕೋವಿಡ್ ನಿರೋಧಕ ಲಸಿಕೆಯನ್ನು ಹಾಕಲು ಆರೋಗ್ಯ ಇಲಾಖೆ
ಕ್ರಮ ಕೈಗೊಂಡಿದ್ದು, ಇದೀಗ ನಗರ ಮತ್ತು ಗ್ರಾಮೀಣ
ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ, ಇದುವರೆಗೂ ಲಸಿಕೆ
ಪಡೆಯದಿರುವವರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಸಲುವಾಗಿ
‘ಮನೆ ಮನೆಗೆ ಲಸಿಕಾ ಮಿತ್ರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಅತಿ ದೊಡ್ಡ ಉಚಿತ ಲಸಿಕಾ ಅಭಿಯಾನವನ್ನು ಈಗಾಗಲೆ
ಜಾರಿಗೊಳಿಸಿದ್ದು, ಪ್ರತಿಯೊಬ್ಬ ಅರ್ಹರಿಗೂ ಎರಡೂ ಡೋಸ್ ಕೋವಿಡ್
ನಿರೋಧಕ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಲಸಿಕೆಯ
ಖಚಿತತೆ- ಜೀವನ ಸುರಕ್ಷತೆ ಎಂಬ ಘೋಷವಾಕ್ಯದೊಂದಿಗೆ
ತಾಲ್ಲೂಕಿನಲ್ಲಿ ಶೇ. 100 ರಷ್ಟು ಲಸಿಕಾಕರಣವನ್ನು ಪೂರ್ಣಗೊಳಿಸಲು
ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರತಿ ಮನೆ ಮನೆಗೆ ತೆರಳಿ, ಪರಿಶೀಲಿಸಿ,
ಇದುವರೆಗೂ ಒಂದೂ ಡೋಸ್ ಪಡೆಯದಿರುವವರಿಗೆ ಹಾಗೂ ಮೊದಲ
ಡೋಸ್ ಪಡೆದು, ನಿಗದಿತ ಅವಧಿಯ ಬಳಿಕವೂ ಎರಡನೆ ಡೋಸ್
ಪಡೆಯದೇ ಇರುವವರನ್ನು ಹುಡುಕಿ, ಅಂತಹವರಿಗೆ ಅವರ
ಮನೆಯಲ್ಲಿಯೇ ಲಸಿಕೆ ನೀಡಲು ‘ಮನೆ ಮನೆಗೆ ಲಸಿಕಾ ಮಿತ್ರ’
ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮ ನಗರ
ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಮುಂದುವರೆಯಲಿದೆ.
ಕೋವಿಡ್ ಸೋಂಕಿನಿಂದ ಉಂಟಾಗುವ ಸಂಕಷ್ಟದಿಂದ ಪಾರಾಗಲು ಲಸಿಕೆ
ಪಡೆಯುವುದು ಹಾಗೂ ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ
ಕಾಯ್ದುಕೊಳ್ಳುವುದೇ ಈಗಿನ ಪರಿಹಾರ ಮಾರ್ಗವಾಗಿದೆ.
ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ತಪ್ಪದೆ ಕೋವಿಡ್ ನಿರೋಧಕ
ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ತಾಲ್ಲೂಕು
ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ ಮಾಡಿದ್ದಾರೆ.