ಹೊನ್ನಾಳಿ:
ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಪ್ರಜ್ಞಾವಂತರನ್ನಾಗಿಸುವ ಹೊಣೆ ಪೋಷಕರ ಮೇಲಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಬಳ್ಳೇಶ್ವರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಶಾಲಾ ಬ್ಯಾಗ್‍ಗಳ ವಿತರಣಾ ಸಮಾರಂಭದಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು.
ಶಿಕ್ಷಣಕ್ಕೆ ಇರುವ ಬೆಲೆ ಬೇರಾವುದಕ್ಕೂ ಇಲ್ಲ. ಆದ್ದರಿಂದ, ತಂದೆ-ತಾಯಿಗಳು ಹಾಗೂ ಎಲ್ಲಾ ಪೋಷಕರೂ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸಲು ಮುಂದಾಗಬೇಕು ಎಂದು ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರದ ಕೆಲ ವರ್ಷಗಳಲ್ಲಿ ಶಿಕ್ಷಣಕ್ಕಾಗಿ ಬಹಳ ಕಷ್ಟಪಡಬೇಕಿತ್ತು. ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು ಇರಲಿಲ್ಲ. ಶಾಲೆಗಳು ಇದ್ದ ಕಡೆ ಶಿಕ್ಷಕರ ಕೊರತೆ ಇತ್ತು. ಅಂಥ ಸಂದರ್ಭಗಳಲ್ಲಿ ಉಳ್ಳವರು ಮಾತ್ರ ಉತ್ತಮ ಶಿಕ್ಷಣ ಪಡೆಯುತ್ತಿದ್ದರು. ಆದರೆ, ಪ್ರಸ್ತುತ ವ್ಯವಸ್ಥೆ ಬದಲಾಗಿದೆ. ಎಲ್ಲಾ ಕಡೆ ಸಾಕಷ್ಟು ಸಂಖ್ಯೆಯ ಶಾಲಾ-ಕಾಲೇಜುಗಳು ಸ್ಥಾಪನೆಗೊಂಡಿವೆ. ಬೋಧಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇದರ ಪರಿಣಾಮವಾಗಿ ಎಲ್ಲರಿಗೂ ಶಿಕ್ಷಣ ಸುಲಭವಾಗಿ ಲಭಿಸುತ್ತಿದೆ. ಹಾಗಾಗಿ, ತಮ್ಮ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು. ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದು ವಿವರಿಸಿದರು.
ಬಳ್ಳೇಶ್ವರ ಗ್ರಾಮದ ಮುಖಂಡ ಬಿ.ಆರ್. ಷಣ್ಮುಖಪ್ಪ ಮಾತನಾಡಿ, ಮೂಲತಃ ತಾಲೂಕಿನ ಬಳ್ಳೇಶ್ವರ ಗ್ರಾಮದವರಾದ ಯುವಕ ದರ್ಶನ್ ಬಳ್ಳೇಶ್ವರ ತಮ್ಮ ತಂದೆಯ ಸ್ಮರಣಾರ್ಥ ಬಳ್ಳೇಶ್ವರ ಗ್ರಾಮದ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಅಂಗನವಾಡಿ ಕೇಂದ್ರಕ್ಕೆ ಆರು ಖುರ್ಚಿಗಳನ್ನು ನೀಡುತ್ತಿದ್ದಾರೆ. ಅವರಂತೆ ಸಮಾಜ ಸೇವಾ ಮನೋಭಾವನೆ ಎಲ್ಲರಲ್ಲೂ ಬೆಳೆಯಲಿ ಎಂದು ಆಶಿಸಿದರು.
ಹನುಮಸಾಗರ ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ. ಶ್ರೀಪಾಲ್ ಮಾತನಾಡಿ, ಬಳ್ಳೇಶ್ವರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಿಸಬೇಕು. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಹೇಳಿದರು.
ಬಳ್ಳೇಶ್ವರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಡಿ. ನೇಮಿನಾಥ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ತರಬೇತಿ ಪಡೆದ, ನುರಿತ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳಿಗೆ ಎಲ್ಲಾ ಸವಲತ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪೋಷಕರು ಸುಮ್ಮನೇ ಆಂಗ್ಲ ಮಾಧ್ಯಮದ ಶಾಲೆಗಳತ್ತ ಆಕರ್ಷಿತರಾಗಿ, ನಂತರ ಭ್ರಮನಿರಸನಗೊಳ್ಳದೇ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ತಿಳಿಸಿದರು.
ದಾನಿ ದರ್ಶನ್ ಬಳ್ಳೇಶ್ವರ, ಹನುಮಸಾಗರ ಗ್ರಾಪಂ ಸದಸ್ಯ ಬಿ.ಎನ್. ಸುಭಾಷ್, ಬಳ್ಳೇಶ್ವರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್. ಮಂಜುನಾಥ್, ಸಹ ಶಿಕ್ಷಕ ಜಿ.ಆರ್. ಜಗದೀಶ್‍ಚಂದ್ರ, ಎಸ್ಡಿಎಂಸಿ ಉಪಾಧ್ಯಕ್ಷೆ ರೇಖಾ ಮಾಲತೇಶ್, ಸದಸ್ಯೆ ಸುಧಾ, ಮುಖಂಡರಾದ ಎಂ. ಅಣ್ಣಪ್ಪ, ಅಂಗನವಾಡಿ ಕಾರ್ಯಕರ್ತೆ ಎನ್. ಸವಿತಾ, ಸಹಾಯಕಿ ಪಿ. ನೇತ್ರಾವತಿ ಇದ್ದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಬಳ್ಳೇಶ್ವರ ಗ್ರಾಮದ ಶಾಲೆಯ 35 ವಿದ್ಯಾರ್ಥಿಗಳಿಗೆ ಬ್ಯಾಗ್‍ಗಳನ್ನು ಮತ್ತು ಅಂಗನವಾಡಿ ಕೇಂದ್ರಕ್ಕೆ ಆರು ಖುರ್ಚಿಗಳನ್ನು ವಿತರಿಸಿದರು.

Leave a Reply

Your email address will not be published. Required fields are marked *