ಅರ್ಜಿಗಳ ವಿಲೇವಾರಿ ಮಾಡಲು ಪ್ರಾಮಾಣಿಕ
ಪ್ರಯತ್ನ ಮಾಡಿ : ಜಿಲ್ಲಾಧಿಕಾರಿ
ಜನಸ್ಪಂದನ ಸಭೆಯ ಮೂಲಕ ಅನೇಕ ಸಮಸ್ಯೆಗಳನ್ನು
ಪರಿಹರಿಸಲಾಗುತ್ತಿದ್ದು, ತಮ್ಮ ಸಮಸ್ಯೆಗಳಿಗೆ ಜನರು ಪರಿಹಾರ
ಕಂಡುಕೊಳ್ಳುವ ಭರವಸೆಯಿಂದ ಮನವಿಗಳನ್ನು
ಸಲ್ಲಿಸುತ್ತಾರೆ, ಹಾಗಾಗಿ ಕಳಕಳಿಯಿಂದ ಜನರ ಸಮಸ್ಯೆಗಳಿಗೆ
ಪರಿಹಾರ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ
ಸಭೆಯಲ್ಲಿ ಜನರ ಅವಹಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು,
ಅಧಿಕಾರಿಗಳು ಜನಸಾಮಾನ್ಯರ ಕೆಲಸ ಕಾರ್ಯಗಳನ್ನು
ಕಳಕಳಿಯಿಂದ ತ್ವರಿತಗತಿಯಲ್ಲಿ ಮಾಡುವ ಮೂಲಕ ಜನರ
ಕಷ್ಟಗಳಿಗೆ ಸ್ಪಂದಿಸಬೇಕು, ತಮ್ಮ ಸೇವೆಯ ಕೊನೆಯ
ದಿನದವರೆಗೂ ಸೇವಾ ಮನೋಭಾವವನ್ನು ಹೊಂದಿರಬೇಕು
ಎಂದರು.
ಜನಸ್ಪಂದನ ಸಭೆಯಲ್ಲಿ ಕೆ.ಬಿ ಬಡಾವಣೆ ನಿವಾಸಿ ಪ್ರಕಾಶ್
ಎಂಬುವರು ಅರ್ಜಿ ನೀಡಿ ನಗರದ ಮಧ್ಯ ಭಾಗದಲ್ಲಿರುವ
ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಫುಟ್‍ಪಾತ್ ಒತ್ತುವರಿ,
ಅಕ್ರಮವಾಗಿ ದೇವಸ್ಥಾನ ವಿದ್ಯುತ್ ಬಳಕೆ ಸೇರಿದಂತೆ ಇನ್ನಿತರೆ ಅನೇಕ
ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು
ಅದರಲ್ಲಿ ಗಾಂಜಾ ಮಾರಾಟ ಸೇರಿದೆ, ಇಂತಹ ಕೃತ್ಯಗಳನ್ನು
ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ
ಕೈಗೊಳುವಂತೆ ಮನವಿ ಸಲ್ಲಿಸಿದರು. ಪ್ರತಿಕ್ರಿಯಿಸಿ
ಜಿಲ್ಲಾಧಿಕಾರಿಗಳು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ
ಆರೋಪ ಕೇಳಿ ಬಂದಿರುವ ಸ್ಥಳದಲ್ಲಿ ತನಿಖೆ ನಡೆಸಿ ಸೂಕ್ತ
ಕಾನೂನು ಕ್ರಮ ಜರುಗಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಗಾಂಧಿನಗರದ ನಿವಾಸಿ ಶಶಿಕಲಾ ಎಂಬ ವಿಕಲಚೇತನ ಮಹಿಳೆ
ಯಂತ್ರಚಾಲಿತ ದ್ವಿಚಕ್ರ ವಾಹನ ಮತ್ತು ಆಧಾರ ಸಾಲ ಕೋರಿ
ಮನವಿ ಸಲ್ಲಿಸಿದರು. ಸ್ಪಂದಿಸಿದ ಜಿಲ್ಲಾಧಿಕಾರಿಗಳು ವಿಕಲಚೇತನ
ಮಹಿಳೆಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಹಾಗೂ ಆಧಾರ ಸಾಲ
ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ
ಹಾಜರಿದ್ದ ಜಿಲ್ಲಾ ವಿಕಲಚೇತನರ ಅಧಿಕಾರಿಗೆ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ
ಅವರು, ನಗರದ ಎಪಿಎಂಸಿ ಯಾರ್ಡ್ ಫ್ಲೈಓವರ್ ಮೇಲೆ
ಅಳವಡಿಸಲಾಗಿರುವ ವಿದ್ಯುತ್ ದೀಪಗಳು ರಾತ್ರಿ ವೇಳೆಯಲ್ಲಿ
ಉರಿಯುತ್ತಿಲ್ಲ ಕೆಲ ಪುಂಡ ಹುಡುಗರು ರಸ್ತೆ ಮೇಲೆ ಹುಟ್ಟು
ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಇದರಿಂದ ಓಡಾಡುವ ಜನರಿಗೆ
ತೊಂದರೆಯಾಗುತ್ತಿದೆ ತಕ್ಷಣ ವಿದ್ಯುತ್ ದೀಪ ಸರಿಪಡಿಸಿ ಎಂದರು.
ಫ್ಲೈಓವರ್ ಮೇಲೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳನ್ನು
ಸರಿಪಡಿಸುವಂತೆ ಎಪಿಎಂಸಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ
ನೀಡಿದರು.
ದೈಹಿಕ ವಿಕಲಚೇತನ ಕ್ರೀಡಾಪಟುಗಳು ಮನವಿ ನೀಡಿ
ಪ್ರಸಕ್ತ ಸಾಲಿನ ಮಹಾನಗರ ಪಾಲಿಕೆಯ ಶೇ.05ರ ಅನುದಾನದಲ್ಲಿ
ಕ್ರೀಡಾ ಪ್ರೋತ್ಸಾಹ ಧನವನ್ನು ಮೀಸಲಿಡುವಂತೆ ಮನವಿ
ನೀಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಪಾಲಿಕೆ ಅನುದಾನದಲ್ಲಿ
ಪ್ರೋತ್ಸಾಹ ಧನವನ್ನು ಮೀಸಲಿರುಸುವಂತೆ ಶಿಫಾರಸ್ಸು
ಮಾಡಲಾಗುವುದೆಂದು ತಿಳಿಸಿದರು.
ಜಗಳೂರು ತಾಲ್ಲೂಕಿನ ಚಿಕ್ಕ ಮಲ್ಲನಹೊಳೆ ಗ್ರಾಮದ
ಮುಖಂಡರೊಬ್ಬರು ಮನವಿ ನೀಡಿ ಗ್ರಾಮದಲ್ಲಿ ವಸತಿ ರಹಿತರಿಗೆ ವಸತಿ
ಹಾಗೂ ವಾರದಲ್ಲಿ ಮೂರು ದಿನಗಳ ಕಾಲ ಕೃಷಿ ಇಲಾಖೆಯ
ಪರಿಕರಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸಲು ಅನುವು
ಮಾಡಿಕೊಡುವಂತೆ ಹಾಗೂ ಎಸ್‍ಎಸ್‍ಎಂ ನಗರದ ನಿವಾಸಿ ಪಾಮೀದಾ,
ಚೌಕಿಪೇಟೆ ನಿವಾಸಿ ಶಮೀಮ್ ಬಾನು ಅವರು ಆಶ್ರಯ ಯೋಜನೆಯಡಿ
ಮನೆ ಕಲ್ಪಿಸಿಕೊಡುವಂತೆ ಮನವಿ ನೀಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ
ಮನೆ ಮಂಜೂರು ಕುರಿತು ಜಿಲ್ಲಾ ಪಂಚಾಯತ್ ಸಿಇಒ ಹಾಗೂ
ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವ
ಭರವಸೆ ನೀಡಿದರು.
ಚನ್ನಗಿರಿ ತಾಲ್ಲೂಕಿನ ಅರಶಿನಘಟ್ಟ ಗ್ರಾಮದ
ಮಹಿಳೆಯೋರ್ವರು ಮನವಿ ಸಲ್ಲಿಸಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ
ಮಾರಾಟ ದಂಧೆ ನಡೆಯುತ್ತಿದ್ದು, ಇದರಿಂದ ಸಾಮಾಜಿಕ
ಸಮಸ್ಯೆಗಳಾಗುತ್ತಿವೆ, ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ
ಮನವಿ ಮಾಡಿದರು. ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ, ಅಕ್ರಮವಾಗಿ ಮದ್ಯ
ಮಾರಾಟ ಮಾಡುತ್ತಿರುವುದರ ಕುರಿತು ತನಿಖೆ ನಡೆಸಿ ಕ್ರಮ
ಕೈಗೊಳ್ಳುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ತಾಕೀತು
ಮಾಡಿದರು.
ಸಭೆಯಲ್ಲಿ ವಿಧವಾ ವೇತನ, ಜಮೀನಿನ ಖಾತೆ ನೋಂದಣಿ, ಬಸ್
ವ್ಯವಸ್ಥೆ, ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಪರಿಹಾರ ಕೋರಿ,
ನಿಗಮಗಳಲ್ಲಿ ಸಾಲ ಸೌಲಭ್ಯ, ಆಶ್ರಯ ಯೋಜನೆಯಡಿ ವಸತಿ
ಸೌಲಭ್ಯ ಸೇರಿದಂತೆ ಸಾರ್ವಜನಿಕರಿಂದ ಅನೇಕ ಅಹವಾಲುಗಳನ್ನು
ಸ್ವೀಕರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಡಾ.ಚನ್ನಪ್ಪ, ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ಪ್ರಭಾರ
ಅಪರ ಜಿಲ್ಲಾಧಿಕಾರಿ ನಜ್ಮಾ, ಧೂಡಾ ಆಯುಕ್ತ ಕುಮಾರಸ್ವಾಮಿ,
ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ
ಮಲ್ಲಾಪುರ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ
ಚಂದ್ರಶೇಖರ್ ಸುಂಕದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ
ರೇಷ್ಮಾ ಕೌಸರ್, ಸ್ಮಾರ್ಟ್ ಸಿಟಿ ರವೀಂದ್ರ ಮಲ್ಲಾಪುರ ಸೇರಿದಂತೆ ವಿವಿಧ
ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.